ಅಮಿತ್ ಶಾ ರಾಜೀನಾಮೆ ನೀಡಲಿ: ರಾಯರಡ್ಡಿ

| Published : Nov 13 2025, 01:15 AM IST

ಸಾರಾಂಶ

ವೈದ್ಯರಾಗಿದ್ದುಕೊಂಡು ಇಂತಹ ಕೃತ್ಯ ಎಸಗಿಸುವುದು ಎಂದರೆ ಅವರು ಮನುಷ್ಯರೇ ಅಲ್ಲ.

ಕೊಪ್ಪಳ: ದೆಹಲಿ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಅತ್ಯಂತ ಅಮಾನವೀಯವಾಗಿದ್ದು, ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕಿಡಿಕಾರಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಘಟನೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಅದಕ್ಕೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿರುವ ಅವರು, ಪ್ರತಿಯೊಂದಕ್ಕೂ ರಾಜೀನಾಮೆ ಕೇಳುವ ಬಿಜೆಪಿ ನಾಯಕರು ಈ ವಿಷಯದಲ್ಲಿ ಯಾಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದರು.

ವೈದ್ಯರಾಗಿದ್ದುಕೊಂಡು ಇಂತಹ ಕೃತ್ಯ ಎಸಗಿಸುವುದು ಎಂದರೆ ಅವರು ಮನುಷ್ಯರೇ ಅಲ್ಲ. ಪಾಕಿಸ್ತಾನದ ಜೈಶ್ ಎ ಮಹ್ಮದ್ ಸಂಘಟನೆ ಕೈವಾಡ ಇದೆ ಎನ್ನಲಾಗುತ್ತಿದೆ.

ಘಟನೆಯನ್ನು ನಮ್ಮ ನಾಯಕ ಮಲ್ಲಿಕಾರ್ಜುನ್ ಖರ್ಗೆ ಖಂಡಿಸಿದ್ದಾರೆ, ನಾನು ಬಲವಾಗಿ ಖಂಡಿಸುತ್ತೇನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಇಂತಹ ಘಟನೆ ಆದಾಗಲೆಲ್ಲ ಅವರನ್ನು ಬಿಡುವುದಿಲ್ಲ ಎಂದು ಕಳೆದ ಹತ್ತು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಅವರು ಹೇಳುತ್ತಿರುವುದು ಹೊಸದೇನು ಅಲ್ಲ. ಆದರೆ, ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವ ಸರ್ಕಾರ ಇದೆ. ದೆಹಲಿಯಲ್ಲಿಯೂ ಬಿಜೆಪಿ ಸರ್ಕಾರ ಇದೆ. ಹಾಗಾದರೆ ಅಲ್ಲಿರುವ ಇಂಟಲಿಜೆನ್ಸ್‌ ಏನು ಮಾಡುತ್ತಿವೆ. ಇದು ಅವರ ವಿಫಲತೆ, ಅಟ್ಟರ ಪ್ಲಾಪ್ ಅಲ್ಲವೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಬರಿ ಮಾತನಾಡುತ್ತಿದ್ದಾರೆ. ಆದರೆ, ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಯಾಕೆ ಡಿಕ್ಲೇರ್ ಮಾಡಿಸುತ್ತಿಲ್ಲ. ಆ ಶಕ್ತಿ ಇದೆಯಾ ಅವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲು ದೇಶದ ಜನರಲ್ಲಿ ಕ್ಷಮೆ ಕೇಳಲಿ ಎಂದರು.

ಬಿಹಾರ ಚುನಾವಣೆ ಮುನ್ನವೇ ಯಾಕೆ ಹಿಂಗಾಯಿತು ಎನ್ನುವುದು ನನಗೂ ಅನುಮಾನ ಇದೆ. ಮೊದಲ ಸುತ್ತಿನಲ್ಲಿ ಗೆಲ್ಲೋಕೆ ಆಗಿಲ್ಲ ಎಂದು ಎರಡನೇ ಸುತ್ತಿನ ಚುನಾವಣೆ ವೇಳೆ ಮಾಡಿದರಾ ಎನ್ನುವ ಅನುಮಾನ ಇದೆ. ಹಾಗಂತ ನಾನು ಕೈವಾಡ ಇದೆ ಎಂದು ಹೇಳುತ್ತಿಲ್ಲ. ಅದಕ್ಕೆ ಯಾವ ಸಾಕ್ಷಿನೂ ಇಲ್ಲ. ಆದರೆ, ನನಗೆ ಹಾಗೇ ಅನಿಸುತ್ತಿದೆ ಎಂದರು.

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ರಾಯರಡ್ಡಿ

ಸಿದ್ದರಾಮಯ್ಯ ಐದು ವರ್ಷ ಪೂರ್ಣ ಸಿಎಂ ಆಗಿರುತ್ತಾರೆ ಎಂದು ಹಲವಾರು ಬಾರಿ ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಈಗ ಸಿಎಂ ಬದಲಾವಣೆ ಕುರಿತು ಮಾಧ್ಯಮದಲ್ಲಿ ಏನು ಬೇಕಾದರೂ ಬರಲಿ, ಆದರೆ, ಅದು ಆಗದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿಯಂತೆ ಡಿಕ್ಟೇಟರ್‌ಶಿಫ್ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಪಕ್ಷ ಸಿಎಂ ಬದಲಾವಣೆ ಮಾಡಿದರೂ ಅದಕ್ಕೂ ಮೊದಲು ಶಾಸಕರ ಅಭಿಪ್ರಾಯ ಕೇಳಲೇಬೇಕು. ಶಾಸಕರನ್ನು ಕೇಳದೆ ಸಿಎಂ ಅವರನ್ನು ಬದಲಾವಣೆ ಮಾಡಲು ಬರುವುದಿಲ್ಲ. ಮೊದಲು ಶಾಸಕರ ಸಭೆ ಕರೆಯಬೇಕು. ಅವರ ಅಭಿಪ್ರಾಯ ಪಡೆಯಬೇಕು. ಇದೆಲ್ಲವನ್ನು ಮಾಡಿಯೇ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಾಸಕರ ಅಭಿಪ್ರಾಯ ಪಡೆಯದೇ ಹೈಕಮಾಂಡ್ ನಿರ್ಧಾರ ಮಾಡುವುದಿಲ್ಲ. ಡಿ.ಕೆ. ಶಿವಕುಮಾರ ಪಕ್ಷದ ವರಿಷ್ಠರು. ಸಿಎಂ ಬದಲಾವಣೆ ಮಾಡುವ ಕುರಿತು ಯಾರು ಮಾತನಾಡಬಾರದು ಅಂತಾ ಹೇಳಿದ್ದರಲ್ಲಿ ತಪ್ಪೇನು ಇಲ್ಲ.

ನಾನು ಮಂತ್ರಿ ಆಗ್ತಿನೋ ಇಲ್ಲವೋ ಗೊತ್ತಿಲ್ಲ. ಕೊಡ್ತೀನಿ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ, ನೋಡೋಣ ಎಂದರು. ಆದರೆ, ನಾನಂತು ಸಿಎಂ ಸಿದ್ದರಾಮಯ್ಯ ಪರವಾಗಿದ್ದೇನೆ, ಅವರಿಗೆ ಮತ ಹಾಕುತ್ತೇನೆ ಎಂದರು. ಕೋಡ್ತಿನಿ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ ನೋಡೋಣ ಎಂದರು.

ಸಿಎಂ ಸಿದ್ದರಾಮಯ್ಯ ದೆಹಲಿಗೆ ನ.15 ರಂದು ತೆರಳುತ್ತಿದ್ದಾರೆ. ನಾನು ಸಹ ಹೋಗುತ್ತಿದ್ದೇನೆ. ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಿ ಹೋಗುತ್ತಿದ್ದಾರೆ. ಸಂಪುಟ ಪುನರ್ ರಚನೆ ಕುರಿತು ಅಲ್ಲ ಎಂದರು.