ಐತಿಹಾಸಿಕ ದ್ವಾರಸಮುದ್ರ ಕೆರೆಗೆ ಬಾಗಿನ ಅರ್ಪಣೆ

| Published : Jul 03 2025, 11:47 PM IST

ಸಾರಾಂಶ

ದ್ವಾರಸಮುದ್ರ ಕೆರೆಯ ಪರಿಸರವನ್ನು ಸ್ವಚ್ಛವಾಗಿಡಲು ಶಾಶ್ವತ ಕ್ರಮವನ್ನು ಶೀಘ್ರದಲ್ಲೇ ಕೈಗೊಂಡು, ವೀಕ್ಷಣೆಗೆ ಬರುವ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಬೇಲೂರು ಕ್ಷೇತ್ರ ಶಾಸಕ ಎಚ್.ಕೆ.ಸುರೇಶ್ ಹೇಳಿದರು. ದ್ವಾರಸಮುದ್ರ ಕೆರೆ ತುಂಬಿ ಬಾಗಿನ ಅರ್ಪಿಸುವ ನನ್ನ ಭಾಗ್ಯ ನನ್ನದಾಗಿದೆ. ಪ್ರತೀ ಬಾರಿ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟಂಬರ್‌ ತಿಂಗಳಲ್ಲಿ ಕೋಡಿ ಬೀಳುತ್ತಿತ್ತು. ಆದರೆ ಈ ವರ್ಷ ಜೂನ್ ತಿಂಗಳಲ್ಲೇ ಕೆರೆ ತುಂಬಿ ಹರಿಯುತ್ತಿರುವುದು ನಮ್ಮ-ನಿಮ್ಮ ಭಾಗ್ಯ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ದ್ವಾರಸಮುದ್ರ ಕೆರೆಯ ಪರಿಸರವನ್ನು ಸ್ವಚ್ಛವಾಗಿಡಲು ಶಾಶ್ವತ ಕ್ರಮವನ್ನು ಶೀಘ್ರದಲ್ಲೇ ಕೈಗೊಂಡು, ವೀಕ್ಷಣೆಗೆ ಬರುವ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಬೇಲೂರು ಕ್ಷೇತ್ರ ಶಾಸಕ ಎಚ್.ಕೆ.ಸುರೇಶ್ ಹೇಳಿದರು.ವಾಡಿಕೆಗೂ ಮುನ್ನವೇ ಕೋಡಿಬಿದ್ದು ಹರಿಯುತ್ತಿರುವ ಇಲ್ಲಿನ ದ್ವಾರಸಮುದ್ರ ಕೆರೆಗೆ ಪುಷ್ಪಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡುತ್ತ, ಕರ್ನಾಟಕದಲ್ಲಿ ಈ ಬಾರಿ ಪ್ರಥಮವಾಗಿ ನನ್ನ ಕ್ಷೇತ್ರದ ಯಗಚಿ ಅಣೆಕಟ್ಟು ತುಂಬಿ ಹರಿಯಿತು. ಅದೇ ರೀತಿ ಈ ಭಾಗದ ಕೆರೆಗಳಲ್ಲಿ ದ್ವಾರಸಮುದ್ರ ಕೆರೆ ತುಂಬಿ ಬಾಗಿನ ಅರ್ಪಿಸುವ ನನ್ನ ಭಾಗ್ಯ ನನ್ನದಾಗಿದೆ. ಪ್ರತೀ ಬಾರಿ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟಂಬರ್‌ ತಿಂಗಳಲ್ಲಿ ಕೋಡಿ ಬೀಳುತ್ತಿತ್ತು. ಆದರೆ ಈ ವರ್ಷ ಜೂನ್ ತಿಂಗಳಲ್ಲೇ ಕೆರೆ ತುಂಬಿ ಹರಿಯುತ್ತಿರುವುದು ನಮ್ಮ-ನಿಮ್ಮ ಭಾಗ್ಯ. ೨೦೧೭ರಲ್ಲಿ ಸ್ವಾಮೀಜಿಗಳ ಮತ್ತು ರೈತರ ಹೋರಾಟದ ಫಲವಾಗಿ ಈ ಕೆರೆಗೆ ಯಗಚಿ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ವ್ಯವಸ್ಥೆಯಾಗಿದೆ. ಆದರೆ, ಈ ಬಾರಿ ಮಳೆರಾಯನ ಕೃಪೆಯಿಂದ ಕೆರೆಯು ತುಂಬಿದೆ. ರಣಘಟ್ಟ ಯೋಜನೆ, ಎತ್ತಿನಹೊಳೆ ಯೋಜನೆಗಳು ಪೂರ್ಣಗೊಂಡರೆ ಇಲ್ಲಿನ ಕೆರೆಯಲ್ಲಿ ಸದಾಕಾಲ ನೀರು ತುಂಬಿ ಹರಿಯುವುದು ನಿಶ್ಚಿತ. ಕಾಮಗಾರಿಗಳನ್ನು ತ್ವರಿತವಾಗಿ ಮುನ್ನಡೆಸಿ ಮುಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ರಣಘಟ್ಟ ಕಾಲುವೆ ಕೆಲಸವು ಸ್ವಲ್ಪ ಬಾಕಿ ಇದ್ದು, ಜಮೀನು ವಶಪಡಿಸಿಕೊಳ್ಳುವ ವಿಷಯದಲ್ಲಿ ಸಣ್ಣ ಸಮಸ್ಯೆಯಾಗಿದೆ ಎಂದು ಪುಷ್ಪಗಿರಿ ಸ್ವಾಮೀಜಿಯವರಿಂದ ತಿಳಿದು ಬಂದಿದೆ. ಅದನ್ನು ಕೂಡಲೇ ಬಗೆಹರಿಸಲಾಗುವುದು ಎಂದ ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುರೇಶ್ ಶಾಸಕರಾದ ಬಳಿಕ ಹೋಬಳಿಯ ಎಲ್ಲ ಕೆರೆಗಳೂ ಸತತವಾಗಿ ತುಂಬಿ ಹರಿಯುತ್ತಿವೆ. ಮಳೆರಾಯನ ಕೃಪೆಯೂ ಚೆನ್ನಾಗಿದ್ದು ರೈತರು ಸಂತಸದಲ್ಲಿದ್ದಾರೆ. ಹೋಬಳಿಯ ಜತೆಗೆ ಹೊರ ಜಿಲ್ಲೆಯ ಚಿಕ್ಕಮಗಳೂರು, ಚಿತ್ರದುರ್ಗ ಕೆರೆಗಳಿಗೂ ದ್ವಾರಸಮುದ್ರ ಕೆರೆಯಿಂದ ಹೊರ ಹೋಗುವ ನೀರು ವರದಾನವಾಗುತ್ತಿದೆ. ಹಾಗಾಗಿ ಶೀಘ್ರದಲ್ಲಿ ರಣಘಟ್ಟ ಕಾಲುವೆ ಕಾಮಗಾರಿಯನ್ನು ಮುಗಿಸಿ ಅದರಲ್ಲಿ ಯಗಚಿ ನದಿಯ ನೀರನ್ನು ಹರಿಸಬೇಕು. ದ್ವಾರಸಮುದ್ರ ಕೆರೆಯ ಪರಿಸರದಲ್ಲಿ ಸುಂದರ ಉದ್ಯಾನವನ ನಿರ್ಮಿಸಿ, ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಜನರು ಬರುವ ವಾತಾವರಣ ಸೃಷ್ಟಿಸಬೇಕು. ಬರುವ ಜನತೆಗೆ ಕೂರಲು ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಕುಮಾರ್‌ ಮಾತನಾಡಿ, ಕೆರೆಯ ಸುತ್ತಲಿನ ಸೌಂದರ್ಯವರ್ಧನೆಗೆ ಪಂಚಾಯಿತಿ ವತಿಯಿಂದ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಸುಂದರ್ ರಾಜ್, ಎಂಜಿನಿಯರ್‌ ಉಮೇಶ್, ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಜಗದೀಶ್, ಪಿಎಸ್‌ಐ ಸಿದ್ದಲಿಂಗ ಬಣಸೆ, ಪಿಡಿಒ ವಿರೂಪಾಕ್ಷ, ಕಾರ್ಯದರ್ಶಿ ಶೈಲಜಾ, ಗ್ರಾಪಂ ಉಪಾಧ್ಯಕ್ಷೆ ಸುಮ ವೆಂಕಟೇಶ್, ಸದಸ್ಯರಾದ ಮಲ್ಲೇಶಪ್ಪ, ರಮೇಶ್, ರಶ್ಮಿ ವಿನಯ್, ಲಕ್ಷ್ಮಿಬಸವರಾಜ್, ಶಿವಮ್ಮಮಲ್ಲೇಶ್, ಮುಖಂಡರಾದ ಪರಮೇಶ್, ಚೇತನ್, ರಂಜಿತ್, ಪ್ರಸನ್ನ, ವಿನಯ್, ಅಶೋಕ್, ಸೋಮಶೇಖರ್‌ ಹಾಜರಿದ್ದರು.