ಸಾರಾಂಶ
ಯೋಗ ಗುರು, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಅಶೋಕ ಗೌರಗೊಂಡ (42) ಬುಧವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ಯೋಗ ಗುರು, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಅಶೋಕ ಗೌರಗೊಂಡ (42) ಬುಧವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಮೂಲದವರಾದ ಅಶೋಕ ಅವರು ಬುಧವಾರ ತಡರಾತ್ರಿ 11 ಗಂಟೆಯ ಸುಮಾರಿಗೆ ತಾಂವಶಿ ಗ್ರಾಮದಿಂದ ಅಥಣಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ಆಗ ಬೈಕ್ ಅಪಘಾತ ಸಂಭವಿಸಿ ಮುಖ ಮತ್ತು ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರಿಗೆ ತಾಯಿ, ಹೆಂಡತಿ, ಮೂರು ಜನ ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಶೋಕ ಗೌರಗೊಂಡ ಅವರು ಅಥಣಿ ಪಟ್ಟಣದಲ್ಲಿಯೇ ವಾಸವಾಗಿದ್ದು, ರಿಯಲ್ ಎಸ್ಟೇಟ್ ಉದ್ಯೋಗದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಅನೇಕ ಸಾಮಾಜಿಕ ಮತ್ತು ಕನ್ನಡಪರ ಕಾರ್ಯಕ್ರಮಗಳಲ್ಲಿ, ಹೋರಾಟದಲ್ಲಿ ಭಾಗವಹಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯ ಸ್ವಗ್ರಾಮವಾದ ತಾವಂಶಿ ಗ್ರಾಮದಲ್ಲಿ ಗುರುವಾರ ನೆರವೇರಿತು. ಕರವೇಯಿಂದ ಶ್ರದ್ಧಾಂಜಲಿ:
ಕರ್ನಾಟಕ ರಕ್ಷಣಾ ವೇದಿಕೆ( ಎಚ್ ಶಿವರಾಮೇಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಯಾಗಿದ್ದ ಅಶೋಕ ಗೌರಗೊಂಡ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಭೆ ನಡೆಸಿದರು. ಅಶೋಕ ಗೌರಗೊಂಡ ಕರವೇ ಸಂಘಟನೆಯ ಸದಸ್ಯರಾಗಿ ಅನೇಕ ಕನ್ನಡಪರ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡುತ್ತಾ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿದ್ದರು. ಅವರ ಅಕಾಲಿಕ ನಿಧನಕ್ಕೆ ಒಂದು ನಿಮಿಷ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.