ಕನ್ನಡ-ತೆಲುಗು ರಂಗಭೂಮಿಯ ಅನರ್ಘ್ಯರತ್ನ ಅದೋನಿ ವೀಣಾ

| Published : Nov 01 2024, 12:08 AM IST

ಸಾರಾಂಶ

ಆಂಧ್ರದ ಆಲೂರು ತಾಲೂಕು ಕರ್ನೂಲ್ ಜಿಲ್ಲೆಯ ಹುಳೇಬೀಡು ವೀಣಾ ಅವರ ಸ್ವಗ್ರಾಮ. ತಾತ ಭೈರವಿರಂಗಪ್ಪ ಖ್ಯಾತ ರಂಗನಿರ್ದೇಶಕರು.

ಮಂಜುನಾಥ ಕೆ.ಎಂ.

ಬಳ್ಳಾರಿ: ಹುಟ್ಟಿ ಬೆಳೆದಿದ್ದು ಆಂಧ್ರಪ್ರದೇಶದಲ್ಲಿ. ಮಾತೃಭಾಷೆ ತೆಲುಗು. ರಂಗಭೂಮಿ ಆರಂಭ ದಿನಗಳನ್ನು ಶುರು ಮಾಡಿದ್ದು ಆಂಧ್ರದಲ್ಲಾದರೂ ಬದುಕಿನ ಬಹುಭಾಗವನ್ನು ಕನ್ನಡ ರಂಗಭೂಮಿ ಸೇವೆಗೆ ಅರ್ಪಣೆಗೊಳಿಸಿಕೊಂಡವರು ಹಿರಿಯರಂಗಭೂಮಿ ಕಲಾವಿದೆ ಆದೋನಿ ವೀಣಾ!

ಆಂಧ್ರದ ಆಲೂರು ತಾಲೂಕು ಕರ್ನೂಲ್ ಜಿಲ್ಲೆಯ ಹುಳೇಬೀಡು ವೀಣಾ ಅವರ ಸ್ವಗ್ರಾಮ. ತಾತ ಭೈರವಿರಂಗಪ್ಪ ಖ್ಯಾತ ರಂಗನಿರ್ದೇಶಕರು. ತಾಯಿ ಹುಳೇಬೀಡು ರಂಗಮ್ಮ ವೃತ್ತಿರಂಗಭೂಮಿ ಕಲಾವಿದೆ. ಹೀಗಾಗಿ, ವೀಣಾ ಅವರಿಗೆ ಮನೆಯಲ್ಲಿಯೇ ರಂಗಪರಿಸರ ಸಿಕ್ಕಿತು. ಆದೋನಿಯಲ್ಲಿಯೇ ತೆಲುಗು ಮಾಧ್ಯಮದಲ್ಲಿ 7ನೇ ತರಗತಿ ವರೆಗೆ ಓದಿದ ವೀಣಾ ಅವರು 7ನೇ ವರ್ಷಕ್ಕೆ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಸಂಪೂರ್ಣ ನಟಿಯಾಗುವ ಆಸೆ:

ಮಗಳು ವೀಣಾ ನಟಿಯಾಗಬೇಕು ಎಂಬುದು ತಾಯಿ ಆಸೆಯಾಗಿತ್ತು. ಹೀಗಾಗಿ, ಅಭಿನಯ, ನೃತ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು ವೀಣಾ ಅವರು ರಂಗಭೂಮಿ ಸೇವೆ ಸಿದ್ಧಗೊಂಡರು.

12ನೇ ವರ್ಷಕ್ಕೆ "ವೀರ ಅಭಿಮನ್ಯು " ನಾಟಕದಲ್ಲಿ ಉತ್ತರೆ ಪಾತ್ರ ನಿರ್ವಹಿಸುವ ಮೂಲಕ ಸಂಪೂರ್ಣ ನಾಯಕ ನಟಿಯಾಗಿ ಹೊರಹೊಮ್ಮಿದರು. ಬಳಿಕ ಕರ್ನಾಟಕಾಂಧ್ರ ಗಡಿ ಗ್ರಾಮಗಳು ಸೇರಿದಂತೆ ರಾಜ್ಯಾದ್ಯಂತ ಪೌರಾಣಿಕ, ಸಾಮಾಜಿಕ ಹಾಗೂ ಐತಿಹಾಸಿಕ ಹಿನ್ನೆಲೆಯ 3 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಆದೋನಿ ವೀಣಾ ಅವರದ್ದು. ಕರ್ನಾಟಕ, ಆಂಧ್ರಪ್ರದೇಶ ಅಷ್ಟೇ ಅಲ್ಲದೆ ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಕನ್ನಡ ಹಾಗೂ ತೆಲುಗು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ರಂಗನಟಿ ವೀಣಾ.

ಲೀಲಾಜಾಲ ಅಭಿನಯ:

ಎರಡು ಭಾಷೆಗಳಲ್ಲೂ ಪೌರಾಣಿಕ, ಸಾಮಾಜಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ, ಪಾತ್ರಗಳಿಗೆ ಜೀವತುಂಬುಬಲ್ಲ ಅನನ್ಯ ಕಲಾವಿದೆ ಎಂಬುದನ್ನು ಆದೋನಿ ವೀಣಾ ಅವರು ಸಾಬೀತುಪಡಿಸಿದ್ದಾರೆ.

ಏತನ್ಮಧ್ಯೆ ಮದುವೆಯಾಗಲು ನಾಟಕ ಬಿಡಬೇಕು ಎಂಬ ಷರತ್ತಿಗೆ ಒಳಪಟ್ಟು ರಂಗಭೂಮಿಯಿಂದ ಸುಮಾರು ಒಂದು ದಶಕಗಳ ಕಾಲ ದೂರವಿದ್ದ ಆದೋನಿ ವೀಣಾ ಅವರು ಮಂತ್ರಾಲಯ ಮಠದ ಶ್ರೀ ಸುಶಮೀಂದ್ರ ತೀರ್ಥರ ಸಲಹೆಯಂತೆ ಮತ್ತೆ ರಂಗಭೂಮಿ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರೆ. ಇದಕ್ಕೆ ಕುಟುಂಬ ಸದಸ್ಯರು ಸಮ್ಮತಿಸುತ್ತಾರೆ. ಹೀಗಾಗಿ, ರಂಗಭೂಮಿ ಕ್ಷೇತ್ರದಲ್ಲಿಯೇ ಅಗಾಧವಾದ ಸೇವೆ ಸಲ್ಲಿಸಲು ಸಾಧ್ಯವಾಯಿತು ಎನ್ನುವ ವೀಣಾ ಆದೋನಿ ಅವರು, ಮತ್ತೆ ನಾಟಕ ಅಭಿನಯದ ರಂಗಪಯಣ ಮುಂದುವರಿಸುತ್ತಾರೆ.

ವೀಣಾ ಆದೋನಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ನಾಟಕ ಅಕಾಡೆಮಿ, ರಂಗಾಯಣ ಪ್ರಶಸ್ತಿಗಳು ಸಂದಿವೆ. ಅನೇಕ ಸಂಘ ಸಂಸ್ಥೆಗಳು ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ವೀಣಾಗೆ ಸಿನಿಮಾರಂಗದ ಅವಕಾಶದ ಆಹ್ವಾನ: ವೀಣಾ ಆದೋನಿ ಅವರ ನಟನೆ, ನೃತ್ಯ ಪ್ರತಿಭೆಯನ್ನು ಗುರುತಿಸಿ ತೆಲುಗಿನ ಖ್ಯಾತ ನಿರ್ದೇಶಕ ದಾಸರಿ ನಾರಾಯಣ ರಾವ್‌ ಅವರು ತಮ್ಮ "ತೂರ್ಪುವೆಳ್ಳೇರೈಲು " ಸಿನಿಮಾಗೆ ಆಹ್ವಾನಿಸಿದ್ದರು. ತಂದೆಯವರು ಸಿನಿಮಾಕ್ಷೇತ್ರಕ್ಕೆ ಬೇಡ ಎಂದು ಹೇಳಿದ್ದರಿಂದ ವೀಣಾ ಆದೋನಿಯವರು ರಂಗಭೂಮಿಯಲ್ಲಿಯೇ ಉಳಿಯುತ್ತಾರೆ. ತೆಲುಗಿನ ನೆಲದಲ್ಲಿ ಹುಟ್ಟಿದರೂ ಕನ್ನಡ ನನ್ನ ಉಸಿರಾಗಿತ್ತು. ಆದೋನಿ ಆಂಧ್ರದಲ್ಲಿದ್ದರೂ ನನಗೆ ಕನ್ನಡದ ಪರಿಸರ ಸಿಕ್ಕಿತು. ಸಹಜವಾಗಿಯೇ ಕನ್ನಡ ರಂಗಭೂಮಿಯ ಸೆಳೆತವಿತ್ತು. ಹೀಗಾಗಿಯೇ ರಂಗಭೂಮಿ ನಂಟು ಬೆಳೆಸಿಕೊಂಡೆ. ಕನ್ನಡ ನನ್ನ ಬದುಕು-ಭವಿಷ್ಯ ರೂಪಿಸಿಕೊಟ್ಟಿದೆ. ಕನ್ನಡ ಭುವನೇಶ್ವರಿಗೆ ಎಂದೆಂದಿಗೂ ಋಣಿಯಾಗಿರುವೆ ಎನ್ನುತ್ತಾರೆ ಹಿರಿಯರಂಗಭೂಮಿ ಕಲಾವಿದೆ ವೀಣಾ ಆದೋನಿ.