ರಾಮನಗರ: ಪತ್ರಕರ್ತರು ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಜತೆಗೆ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೆ, ಅಭಿವೃದ್ಧಿ ಕೆಲಸಗಳ ಬಗ್ಗೆ ನಮ್ಮ ಜವಾಬ್ದಾರಿ ಸಹ ಹೆಚ್ಚಲಿದ್ದು, ಪತ್ರಕರ್ತರು ಸಮರ್ಥವಾಗಿ ಕೆಲಸ ಮಾಡುತಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು
ರಾಮನಗರ: ಪತ್ರಕರ್ತರು ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಜತೆಗೆ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೆ, ಅಭಿವೃದ್ಧಿ ಕೆಲಸಗಳ ಬಗ್ಗೆ ನಮ್ಮ ಜವಾಬ್ದಾರಿ ಸಹ ಹೆಚ್ಚಲಿದ್ದು, ಪತ್ರಕರ್ತರು ಸಮರ್ಥವಾಗಿ ಕೆಲಸ ಮಾಡುತಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ನಗರದಲ್ಲಿ ಮಾಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ಬಂಧುಗಳ ಸಮಾಗಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಬದುಕು ಕಟ್ಟಿಕೊಳ್ಳಲು ವಿವಿಧ ರಂಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪತ್ರಕರ್ತರು ಪ್ರತಿನಿತ್ಯ ನಾವು ಮಾಡುತ್ತಿರುವ ಮಾಡುವ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಡಿವಿಜಿ ಅವರು ಪತ್ರಕರ್ತರ ಸಂಘಟನೆ ಮಾಡಿ ಅದನ್ನು ನಾಲ್ಕನೇ ಅಂಗವಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದರು.ಈ ಹಿಂದೆ ಕೆಂಪೇಗೌಡರ ಹೆಸರಿನಲ್ಲಿ ಅಜಿತ್ ಹನುಮಕ್ಕನವರ್ ಅವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ರಮಾಕಾಂತ್ ಅವರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಉನ್ನತ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸುವ ಕೆಲಸ ನಿರಂತರ ನಡೆಯಲಿ ಎಂದು ಸಂಘದ ಕಾರ್ಯವನ್ನು ಶ್ಲಾಘಿಸಿ, ಜಿಲ್ಲೆಯ ಎಲ್ಲ ಪತ್ರಕರ್ತರು ಜನಪರ ವರದಿಗಾರರಾಗಿ ಕೆಲಸ ಮಾಡಿ, ಕ್ರಿಯಾಶೀಲ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಮಾಗಡಿ ತಾಲೂಕು ಪತ್ರಕರ್ತರ ಸಂಘದ ಕಾರ್ಯ ಮಾದರಿಯಾಗಿದೆ. ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲ ಪದಾಧಿಕಾರಿಗಳನ್ನುಅಭಿನಂದಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ವ್ಯಕ್ತಿನಿಂದನೆಗಳ ಸುದ್ದಿಗಳಿಗೆ ಪತ್ರಕರ್ತರು ಮನ್ನಣೆ ನೀಡದೆ, ಸುದ್ದಿಯ ಬಗ್ಗೆ ಚಿಂತನೆ ನಡೆಸಿ ವರದಿಗಳನ್ನು ಮಾಡಿದರೆ ಸಮಾಜಕ್ಕೆ ಸೂಕ್ತ ಸಂದೇಶ ಕೊಡಬಹುದು. ಆಗಾಗಿ ತಾಲೂಕು ಸಂಘದ ಪದಾಧಿಕಾರಿಗಳು ಉತ್ತಮ ಕಾರ್ಯ ಮಾಡಿ ಎಂದು ಶುಭ ಹಾರೈಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾಗಡಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಇದಕ್ಕೆ ಶಾಸಕರು, ಅಧ್ಯಕ್ಷರ ಶ್ರಮ ಶ್ಲಾಘನೀಯ. ಸಮಾಜದಲ್ಲಿ ಪತ್ರಕರ್ತ ಎಂದರೆ ಗೌರವವಿದೆ. ವಿವಿಧ ಹಂತಗಳಲ್ಲಿ ತಮ್ಮದೇ ಆದ ಕೊಡುಗೆಯಿದೆ. ಕೆಲವರು ತಮ್ಮ ರಕ್ಷಣೆಗಾಗಿ, ಬ್ಲಾಕ್ ಮೇಲ್ ಮಾಡುವ ಪತ್ರಕರ್ತರು ಇದ್ದಾರೆ. ಅಂತವರನ್ನು ದೂರ ಇಡುವ ಕೆಲಸ ಮಾಡಿ ತಾವು ವೃತ್ತಿ ಬದ್ದತೆ ಮತ್ತು ಶ್ರದ್ಧೆಯನ್ನು ಪ್ರದರ್ಶಿಸಿ ಸಮಾಜಕ್ಕೆ ನೈಜ ಸುದ್ಧಿ ಬಿತ್ತರಿಸಿ ಒಳ್ಳೆಯ ಹೆಸರು ಗಳಿಸಿ ಎಂದು ಕಿವಿಮಾತು ಹೇಳಿದರು.
ಟಿವಿ ೫ ಮುಖ್ಯಸ್ಥ ರಮಾಕಾಂತ್ ಆರ್ಯ ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಕರ್ತರ ಸಂಖ್ಯೆ ಹೆಚ್ಚಾದಂತೆ ನೈಜ ಸುದ್ದಿಗಳ ಬಗ್ಗೆ ಪತ್ರಕರ್ತರು ಸಹ ಜಾಗ್ರತೆ ವಹಿಸುವ ಅಗತ್ಯವಿದೆ. ವಿವಿಧ ಕ್ಷೇತ್ರಗಳಲ್ಲಿ ಯಾವುದಾದರೂ ಅಭಿವೃದ್ಧಿ ಕಂಡರೆ ಅದರ ಹಿಂದೆ ಪತ್ರಕರ್ತರ ಶ್ರಮವಿರುತ್ತದೆ. ಪತ್ರಕರ್ತರು ಪ್ರಶ್ನೆ ಮಾಡುವುದನ್ನು ಕಲಿಯಬೇಕಿದೆ. ನಾವು ವಿಶ್ವಾಸ, ನಂಬಿಕೆಯಿರುವ ಕಡೆ ಇರಬೇಕು. ಕರ್ತವ್ಯ ಬದ್ದತೆ ಇದ್ದರೆ ಎಲ್ಲರೂ ನಿಮ್ಮ ಜೊತೆ ಇರುತ್ತಾರೆ. ಆತ್ಮಾವಲೋಕನ, ಸತ್ಯಾಸತ್ಯತೆ ಇದ್ದರೆ ನಿಜವಾದ ಪತ್ರಕರ್ತರಾಗಲು ಸಾಧ್ಯ. ನನಗೆ ಕೆಂಪೇಗೌಡರ ನೆಲದಲ್ಲಿ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿರುವುದು ಬಹಳ ಸಂತಸ ತಂದಿದೆ ಎಂದರು.ಇದೇ ವೇಳೆ ಟಿವಿ ೫ ಮುಖ್ಯಸ್ಥ ರಮಾಕಾಂತ್ ಆರ್ಯ ಅವರಿಗೆ ಕೆಂಪೇಗೌಡ ಪ್ರಶಸ್ತಿ, ಕನ್ನಡಪ್ರಭ ಜಿಲ್ಲಾ ವರದಿಗಾರ ಎಂ.ಅಪ್ರೋಜ್ ಖಾನ್, ಚನ್ನಪಟ್ಟಣ ವಿಜಯವಾಣಿ ವರದಿಗಾರ ಅಭಿಷೇಕ್ ಅವರಿಗೆ ಜನಪರ ವರದಿಗಾರ ಪ್ರಶಸ್ತಿ, ರೈತ ಸಂಘದ ಧನಂಜಯ್ಯ ಅವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಗಡಿ ತಾಲೂಕು ಅಧ್ಯಕ್ಷ ರಾಮು ತಗ್ಗೀಕುಪ್ಪೆ ಅಧ್ಯಕ್ಷತೆ ವಹಿಸಿದ್ದರು. ಕೆಯುಡ್ಲೂಜೆ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ರಾಜ್ಯ ಸಮಿತಿ ಸದಸ್ಯ ಶಿವಮಾದು, ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷರಾದ ವೆಂಕಟೇಶ್, ಮಂಜುನಾಥ್, ಹಿರಿಯ ಪತ್ರಕರ್ತ ಚಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾರಿಪೂಳ್ಯ ಕೃಷ್ಣಮೂರ್ತಿ, ಟಿ.ಜಿ.ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಕಾಶ್, ವೃತ್ತ ಆರಕ್ಷಕ ನಿರೀಕ್ಷಕರಾದ ಶ್ರೀನಿವಾಸ್, ಮುಖಂಡರಾದ ಜೆ.ಪಿ.ಚಂದ್ರೇಗೌಡ, ಬಗಿನಗೆರೆ ಕುಮಾರ್, ಏಳಗಳ್ಳಿ ತಮ್ಮಣ್ಣ, ಶೈಲಜಾ ವೆಂಕಟೇಶ್, ದೀಪು, ಪ್ರೊ.ನಂಜುಂಡಯ್ಯ, ಸಮಾಜ ಸೇವಕರಾದ ಪ್ರಸನ್ನಗೌಡ, ದಿನೇಶ್, ಪಾಪಣ್ಣ, ಬಸಂತಿ, ರೂಪೇಶ್ ಪತ್ರಕರ್ತರಾದ ಕಿರಣ್, ಸಿದ್ಧಲಿಂಗೇಶ್ವರ್, ಶ್ರೀನಿವಾಸ್, ತೇಜುಮೂರ್ತಿ, ನಾಗೇಶ್, ಪದ್ಮನಾಭ್, ನರಸಿಂಹಮೂರ್ತಿ, ಕುಮಾರ್, ರೂಪೇಶ್, ಬಾಬು ಇತರರಿದ್ದರು.ಪೊಟೋ೧ಸಿಪಿಟಿ೧: ಮಾಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಕನ್ನಡಪ್ರಭ ಜಿಲ್ಲಾವರದಿಗಾರ ಎಂ.ಅಫ್ರೋಜ್ ಖಾನ್ ಹಾಗೂ ವಿಜಯವಾಣಿ ಚನ್ನಪಟ್ಟಣ ವರದಿಗಾರ ಅಭಿಲಾಷ್ ತಿಟ್ಟಮಾರನಹಳ್ಳಿ ಅವರಿಗೆ ಜನಪರ ವರದಿಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.