ಕ್ಷೇತ್ರದ ಆಡಳಿತ ಮಂಡಳಿಯು ಇತ್ತೀಚೆಗೆ ವಿಂದ್ಯಾಗಿರಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಈ ನೂತನ ಶಾಸನ ಬೆಳಕಿಗೆ ಬಂದಿದೆ. ವಿಂದ್ಯಾಗಿರಿಯ ಬಾಹುಬಲಿ ಬೆಟ್ಟದ ಬಂಡೆಯೊಂದರ ಹಿಂಭಾಗದಲ್ಲಿ, ಸಂಪೂರ್ಣವಾಗಿ ಗಿಡಗಂಟಿ ಹಾಗೂ ಬಳ್ಳಿಗಳಿಂದ ಆವೃತ್ತವಾಗಿದ್ದ ಈ ಶಾಸನವನ್ನು ಗುರುತಿಸಲಾಗಿದೆ. ಪ್ರಾಥಮಿಕ ಪರಿಶೀಲನೆಯ ಪ್ರಕಾರ ಇದು ೧೨ನೇ ಶತಮಾನಕ್ಕೆ ಸೇರಿದ ಶಾಸನ ಎಂದು ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಿಶ್ವವಿಖ್ಯಾತ ಜೈನ ಕಾಶಿ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮತ್ತೊಂದು ಅಪೂರ್ವ ಐತಿಹಾಸಿಕ ಶಿಲಾ ಶಾಸನ ಪತ್ತೆಯಾಗಿದೆ. ಇದರೊಂದಿಗೆ ಕ್ಷೇತ್ರದಲ್ಲಿ ದಾಖಲಾದ ಶಾಸನಗಳ ಒಟ್ಟು ಸಂಖ್ಯೆ 54ಕ್ಕೆ ಏರಿಕೆಯಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಶಿಲಾ ಶಾಸನಗಳನ್ನು ಹೊಂದಿರುವ ಐತಿಹಾಸಿಕ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಶ್ರವಣಬೆಳಗೊಳ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.ಸ್ವಚ್ಛತಾ ಕಾರ್ಯದ ವೇಳೆ ಬೆಳಕಿಗೆ ಬಂದ ಇತಿಹಾಸ:
ಕ್ಷೇತ್ರದ ಆಡಳಿತ ಮಂಡಳಿಯು ಇತ್ತೀಚೆಗೆ ವಿಂದ್ಯಾಗಿರಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಈ ನೂತನ ಶಾಸನ ಬೆಳಕಿಗೆ ಬಂದಿದೆ. ವಿಂದ್ಯಾಗಿರಿಯ ಬಾಹುಬಲಿ ಬೆಟ್ಟದ ಬಂಡೆಯೊಂದರ ಹಿಂಭಾಗದಲ್ಲಿ, ಸಂಪೂರ್ಣವಾಗಿ ಗಿಡಗಂಟಿ ಹಾಗೂ ಬಳ್ಳಿಗಳಿಂದ ಆವೃತ್ತವಾಗಿದ್ದ ಈ ಶಾಸನವನ್ನು ಗುರುತಿಸಲಾಗಿದೆ. ಪ್ರಾಥಮಿಕ ಪರಿಶೀಲನೆಯ ಪ್ರಕಾರ ಇದು ೧೨ನೇ ಶತಮಾನಕ್ಕೆ ಸೇರಿದ ಶಾಸನ ಎಂದು ಅಂದಾಜಿಸಲಾಗಿದೆ.ಶ್ರೀಗಳಿಂದ ಪರಿಶೀಲನೆ:ತಜ್ಞರಿಗೆ ಸಂಶೋಧನೆಗೆ ಸೂಚನೆ ವಿಷಯ ತಿಳಿಯುತ್ತಿದ್ದಂತೆಯೇ ಕ್ಷೇತ್ರದ ಪೀಠಾಧಿಪತಿಗಳಾದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸ್ಥಳಕ್ಕೆ ಭೇಟಿ ನೀಡಿ ಶಾಸನವನ್ನು ವೀಕ್ಷಿಸಿದರು. ಬಳಿಕ, ಇಲ್ಲಿನ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಶಾಸನ ವಿಭಾಗದ ತಜ್ಞರು ಹಾಗೂ ವಿದ್ವಾಂಸರಿಗೆ ಈ ಶಾಸನದ ಕುರಿತು ಹೆಚ್ಚಿನ ಸಂಶೋಧನೆ ನಡೆಸುವಂತೆ ಶ್ರೀಗಳು ಸೂಚನೆ ನೀಡಿದ್ದಾರೆ.ಕನ್ನಡ ಲಿಪಿಯಲ್ಲಿದೆ ದಾನ ಶಾಸನ:
ಪತ್ತೆಯಾಗಿರುವ ಹೊಸ ಶಾಸನವು ಕನ್ನಡ ಲಿಪಿಯಲ್ಲಿದ್ದು, ‘ಕಬ್ಬಹಿನ ವೃತ್ತಿ’ಗೆ ಬಿಟ್ಟ ದಾನದ ವಿವರಗಳನ್ನು ಒಳಗೊಂಡಿದೆ ಎಂದು ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ರಮೇಶ್ ಶಾಸ್ತ್ರಿ ಹಾಗೂ ಶಿಲಾ ಶಾಸನ ವಿಭಾಗದ ಹಜಾರಿ ಪಾರ್ಶ್ವನಾಥ್ ಅವರು ಜಂಟಿಯಾಗಿ ಮಾಹಿತಿ ನೀಡಿದ್ದಾರೆ. ಈ ನೂತನ ಶಾಸನದ ಪತ್ತೆಯಿಂದ ಶ್ರವಣಬೆಳಗೊಳದ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಹೊಸ ಆಯಾಮ ಸಿಕ್ಕಂತಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಹಾಗೂ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.