ಸಾರಾಂಶ
ಬೆಳಗಾವಿ : ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು ಕಳೆದ ಒಂದು ವರ್ಷದಲ್ಲಿ 322 ನವಜಾತ ಶಿಶುಗಳ ಸಾವಿಗೀಡಾಗಿವೆ ಎಂಬ ಸುದ್ದಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಭಾನುವಾರ ಮತ್ತೊಬ್ಬರು ಬಾಣಂತಿ ಬೆಳಗಾವಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳವಳಕಾರಿ ಎಂದರೆ, ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಐದು ದಿನಗಳ ಅಂತರದಲ್ಲಿ ಸಂಭವಿಸುತ್ತಿರುವ ಎರಡನೇ ಬಾಣಂತಿ ಸಾವು ಇದಾಗಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.
ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ಮಾಡಿಸಲಾಗುವುದು. ತಪ್ಪಿತಸ್ಥ ವೈದ್ಯರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ತಿಳಿಸಿದ್ದಾರೆ.
ಎದೆನೋವು ಕಾಣಿಸಿಕೊಂಡು ಸಾವು:
ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಬಾಣಂತಿ ವೈಶಾಲಿ ಕೊಟಬಾಗಿ ( 20) ಭಾನುವಾರ ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ವೈಶಾಲಿ ಸಿಜೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಭಾನುವಾರ ಬೆಳಗ್ಗೆಯವರೆಗೂ ಹುಷಾರಾಗಿಯೇ ಇದ್ದರು. ಬೆಳಗ್ಗೆ 7 ಗಂಟೆಗೆ ಎದೆನೋವು ಶುರುವಾಗಿ ನಂತರ ಮೃತಪಟ್ಟಿದ್ದಾರೆ. ವೈದ್ಯರು ಸಮರ್ಪಕ ಚಿಕಿತ್ಸೆ ನೀಡದ ಕಾರಣ ಬಾಣಂತಿ ಸಾವಿಗೀಡಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ವೈಶಾಲಿ ಸಂಭ್ರಮದಿಂದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಡಿ.17ರಂದು ಬಾಣಂತಿ ಸಾವು:
ಡಿ.17ರಂದು ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತಪಟ್ಟಿದ್ದರು. ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ರೊಚ್ಚಿಗೆದ್ದ ಕುಟುಂಬಸ್ಥರು ಬಿಮ್ಸ್ ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ. ಎರಡು ಬಾರಿ ಸಿಜೇರಿಯನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಡಿ.17ರಂದು ಮಧ್ಯರಾತ್ರಿ 2.30ರ ಸುಮಾರಿಗೆ ಕಲ್ಪನಾ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮರುದಿನ ಬೆಳಗ್ಗೆ 8.30ಕ್ಕೆ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ಮಾಡಿಸಲಾಗುವುದು. ತಪ್ಪಿತಸ್ಥ ವೈದ್ಯರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
-ಅಶೋಕ ಶೆಟ್ಟಿ, ಬಿಮ್ಸ್ ನಿರ್ದೇಶಕ