ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಆದ ಜಯಮ್ಮ ಅವರ ಸಾವಿನ ನೋವು ಮಾಸುವ ಮುನ್ನವೇ ನಾಗೇನಹಳ್ಳಿ ಗ್ರಾಮದ ಹಫೀಜುರ್ ರೆಹಮಾನ್ ಅಲಿಯಾಸ್ ಬಾಬು (55) ಎಂಬುವವರು ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಬೆಳೆಗಾರರು ಹಾಗೂ ರೈತಸಂಘದವರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನವಿಡೀ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಅರೇಹಳ್ಳಿ ಹೋಬಳಿಯ ನಾಗೇನಹಳ್ಳಿ ಹಿರೇಹಸಡೆ ಗ್ರಾಮದ ತೋಟದ ಮಾಲೀಕ ಹಫೀಜುರ್‌ ರೆಹಮಾನ್ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ತಮ್ಮ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಒಂಟಿ ಕಾಡಾನೆಯೊಂದು ದಾಳಿ ನಡೆಸಿ ತುಳಿದು ಕೊಂದಿದೆ. ಬೆಳಗ್ಗೆ ತೋಟದ ಕೆಲಸಕ್ಕೆ ತೆರಳುತ್ತಿದ್ದ ರೆಹಮಾನ್ ಅವರಿಗೆ ಎದುರಾದ ಒಂಟಿ ಆನೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ತರುವ ಮಾರ್ಗಮಧ್ಯದಲ್ಲಿ ಸ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಸುತ್ತಮುತ್ತ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಮುಂಭಾಗ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚೌಡನಹಳ್ಳಿ ಗ್ರಾಮದ ಮಹಿಳೆ ಜಯಮ್ಮ ಕಾಡಾನೆ ದಾಳಿಯಿಂದ ಸಾವನ್ನಪ್ಪಿ ಇಪ್ಪತ್ತನಾಲ್ಕು ಗಂಟೆ ಕಳೆಯುವ ಮೊದಲೇ ಒಂಟಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು ತೋಟಕ್ಕೆ ತೆರಳುತ್ತಿದ್ದ ರೈತನನ್ನು ತುಳಿದು ಕೊಂದ ಘಟನೆ ನಡೆದಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಜಮಾಯಿಸಿದ ಮೃತರ ಸಂಬಂಧಿಕರು , ಬೆಳೆಗಾರರು, ವಿವಿದ ಸಂಘಟನೆಗಳು ಹಾಗೂ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸಿದರು. ಮೃತ ದೇಹವನ್ನು ಕೊಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸರ್ಕಾರಿ ಆಸ್ಪತ್ರೆ ಮುಂಭಾಗ ಆಂಬುಲೆನ್ಸ್ ಮುಂದೆ ಜಮಾಯಿಸಿ ಪೊಲೀಸರು ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ದಿಕ್ಕಾರ ಕೂಗಿದರು. ಆ್ಯಂಬುಲೆನ್ಸ್ ಒಳಗಿದ್ದ ಶವವನ್ನು ನಮ್ಮ ವಶಕ್ಕೆ ಕೊಡಬೇಕು ಎಂದು ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆ ಒಡ್ಡಿದರು. ಇದರಿಂದ ಕೆಲಸಮಯ ಆತಂಕದ ವಾತಾವರಣ ಉಂಟಾಗಿತ್ತು.ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು, ರೈತರು, ಕಾಫಿ ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸದೆ ಕುಟುಂಬದವರಿಗೆ ಹಸ್ತಾಂತರಿಸಬೇಕು, ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ರಸ್ತೆ ತಡೆ, ಟೈರ್‌ಗೆ ಬೆಂಕಿ, ಪೊಲೀಸರೊಂದಿಗೆ ವಾಗ್ವಾದ ಹಾಗೂ ತಳ್ಳಾಟದ ಘಟನೆಗಳೂ ನಡೆದವು.ಶಾಸಕ ಎಚ್ ಕೆ ಸುರೇಶ್ ಮಾತನಾಡಿ ಮೃತರ ಕುಟುಂಬಕ್ಕೆ ಯಾವ ರೀತಿ ಸಾಂತ್ವನ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಮೊನ್ನೆ ಮಧ್ಯಾಹ್ನದಿಂದ ನಿನ್ನೆ ರಾತ್ರಿವರೆಗೆ ಜಯಮ್ಮನವರ ಅಂತ್ಯ ಸಂಸ್ಕಾರ ಮತ್ತು ಪ್ರತಿಭಟನೆಯಲ್ಲಿ ನಿರಂತರವಾಗಿ ತೊಡಗಿದ ಮರುದಿನವೇ ಈ ದುರಂತ ಸಾವು ಸಂಭವಿಸಿದೆ. ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಮತ್ತು ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನಮ್ಮ ವಿನಂತಿ ಮತ್ತು ಆಗ್ರಹವೇನೆಂದರೆ, ಇದನ್ನು ಶಾಶ್ವತವಾಗಿ ಪರಿಹರಿಸಿ ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಕರೆ ಸ್ವೀಕರಿಸದ ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನಗೊಂಡ ಮಾಜಿ ಸಚಿವ ಬಿ ಶಿವರಾಂ, ಉಸ್ತುವಾರಿ ಜಿಲ್ಲಾ ಮಂತ್ರಿಗಳಿಗೆ ಫೋನ್ ಮಾಡಿದಾಗ ಕೂಡಲೇ ಪ್ರತಿಕ್ರಿಯಿಸಿ ಮಾಡಿ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆಗೆ ಬರುತ್ತೇನೆ ಎಂದು ಹೇಳಿದರು. ಶಾಸಕರು ಮಾತೆತ್ತಿದರೆ ಸದನದಲ್ಲಿ ಕಾಡಾನೆ ಬಗ್ಗೆ ಮಾತನಾಡಿದೆ ಎಂದು ಹೇಳುತ್ತಾರೆ. ಆದರೆ ಇವರ ಮನವಿಯಿಂದ ಕಾಡಾನೆ ಹಾವಳಿ ಬಗ್ಗೆ ಎಷ್ಟು ಫಲಪ್ರದ ಆಗಿದೆ ಎಂದು ಮಾತ್ರ ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಮಲೆನಾಡು ಭಾಗದಲ್ಲಿ ಪದೇಪದೇ ಕಾಡಾನೆ ದಾಳಿಯಿಂದ. ಒಂಬತ್ತು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಇದುವರೆಗೂ ಕಾಡಾನೆ ಹಾವಳಿ ಬಗ್ಗೆ ನಮ್ಮ ಸಂಸದರಾಗಲಿ ಶಾಸಕರಾಗಲಿ ಯಾರೂ ಕೂಡ ಬಡ ರೈತರ ಪರ ನಿಂತು ಮಾತನಾಡಿಲ್ಲ. ಇವರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಇನ್ನೆಷ್ಟು ಜನರ ಪ್ರಾಣ ಹೋದರೆ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ಸ್ಥಳಕ್ಕೆ ಸಂಬಂಧಪಟ್ಟ ಸಚಿವ, ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳು ಆಗಮಿಸಿ ಕಾಡಾನೆಗಳ ನಿರಂತರ ದಾಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಜನವಸತಿ ಪ್ರದೇಶ ಹಾಗೂ ರೈತರ ತೋಟಗಳಿಗೆ ಕಾಡಾನೆಗಳು ನುಗ್ಗದಂತೆ ಪರಿಣಾಮಕಾರಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಬಿ ಶಿವರಾಂ ಮಾತನಾಡಿ, ಜನ ಬೆಳಗ್ಗೆಯಿಂದ ಸಂಜೆವರೆಗೆ ಬೀದಿಯಲ್ಲಿ ನಿಂತಿದ್ದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಎಷ್ಟು ಸರಿ. "ಈ ಜಿಲ್ಲೆಗೆ ಡೀಸಿ ಹೌದೋ ಅಲ್ವೋ? ಫೋನ್ ಮಾಡಿದರೆ ಸ್ಪಂದನೆ ಮಾಡಲ್ಲ. ಆದರೆ ಇಂತಹ ಡೀಸಿ ಬೇಕಾ? ಜನ ಬೀದಿಯಲ್ಲಿ ನಿಂತಿದ್ದಾರೆ. ಬರಬೇಕಾದರೆ ಆಡಳಿತ ವ್ಯವಸ್ಥೆ ಏನಾಗುತ್ತೆ? ಒಂದು ವೇಳೆ ಲಾಠಿ ಚಾರ್ಜ್ ಆದರೆ ಯಾರು ಜವಾಬ್ದಾರಿ? ಎಸ್‌ಪಿ ಇಲ್ಲ, ಡಿಸಿ ಇಲ್ಲ. ಹತ್ತು ಗಂಟೆಯಿಂದ ಹನ್ನೆರಡುವರೆ ಗಂಟೆವರೆಗೆ ಇಷ್ಟೊಂದು ಸಮಯ ಬೇಕಾ? ಕೇಳುವವರು ಯಾರೂ ಇಲ್ವಾ ಇವರಿಗೆ? " ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ಕಾಡಾನೆ ದಾಳಿಯಿಂದ ತಾಲೂಕಿನಲ್ಲಿ ಇದು 14ನೇ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆನೆಗಳು ಆಸ್ತಿ ಕೇಳಲ್ಲ, ಅಂತಸ್ತು ಕೇಳಲ್ಲ. ಮನುಷ್ಯರಾದ ನಮಗೆ ಆಸ್ತಿ ಬೇಕು. ಆನೆಗಳು ಕೇಳುವುದು ಎರಡೇ ಎರಡು - ಕುಡಿಯಲು ನೀರು ಮತ್ತು ತಿನ್ನಲು ಆಹಾರ. ಇಂದು ಇಡೀ ಅರಣ್ಯ ಪ್ರದೇಶದಲ್ಲಿ ಆನೆ ತಿನ್ನಲು ಆಹಾರವೇ ಇಲ್ಲ. ಅದಕ್ಕಾಗಿ ರೈತರು ಬೆಳೆದ ಬೆಳೆಗಳನ್ನು ತಿನ್ನಲು ಬರುತ್ತಿವೆ, ಆನೆಗಳನ್ನು ಹಿಡಿದು ಭದ್ರಾ ಅರಣ್ಯಕ್ಕೆ ಬಿಟ್ಟು ಅಲ್ಲಿ ಆಹಾರ, ನೀರು ಕೊಟ್ಟು ಶಾಶ್ವತ ಬ್ಯಾರಿಕೇಡ್ ಹಾಕಬೇಕು. ನಾವು ಆನೆಗಳನ್ನು ಪ್ರೀತಿಸುತ್ತೇವೆ. ಅವುಗಳ ಸಂರಕ್ಷಣೆ ಮಾಡಬೇಕು. ನಮ್ಮ ಜನರ ಬದುಕು ಅಸ್ತವ್ಯಸ್ತವಾಗದಂತೆ ನೆಮ್ಮದಿಯಿಂದ ಇರುವಂತೆ ಮಾಡಬೇಕು ಎಂದು ಆಗ್ರಹಿಸಿದರು.