ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕ್ಲಸ್ಟರ್ ಕಿಚನ್ ರಚಿಸಿ ಡಿಡಿಪಿಐಗಳಿಗೆ ನ.೭ರಂದು ಸುತ್ತೋಲೆ ಹೊರಡಿಸಿರುವುದು ಖಂಡನೀಯ,
ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ಸದಸ್ಯರ ಆಕ್ರೋಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಶಾಲಾಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ, ಶಾಲೆಗಳಿಗೆ ಗೈರುಹಾಜರಾಗುವ ಮಕ್ಕಳನ್ನು ತಡೆಯುವ ಉದ್ದೇಶದಿಂದ ೨೫ ವರ್ಷಗಳ ಹಿಂದೆ ಆರಂಭಿಸಲಾದ ಮಧ್ಯಾಹ್ನದ ಬಿಸಿಯೂಟ ಯೋಜನೆ ಜವಾಬ್ದಾರಿಯನ್ನು ಕ್ಲಸ್ಟರ್ ಕಿಚನ್ ರಚಿಸಿ, ಅದಕ್ಕೆ ಸಂವಹಿಸಲು ಡಿಡಿಪಿಐಗಳಿಗೆ ಸುತ್ತೋಲೆ ಹೊರಡಿಸಿರುವ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಜಂಟಿನಿರ್ದೇಶಕರ ವಿದ್ಯಾರ್ಥಿ ವಿರೋಧಿ ಧೋರಣೆ ಖಂಡಿಸಿ ನಗರದಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆ ಹೊರಟ ಅಕ್ಷರದಾಸೋಹ ನೌಕರರು, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು, ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ವಿವಿಧ ಹಕ್ಕೋತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕ್ಲಸ್ಟರ್ ಕಿಚನ್ ರಚಿಸಿ ಡಿಡಿಪಿಐಗಳಿಗೆ ನ.೭ರಂದು ಸುತ್ತೋಲೆ ಹೊರಡಿಸಿರುವುದು ಖಂಡನೀಯ, ೬ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಸ್ಥಳದಲ್ಲೇ ಪೌಷ್ಠಿಕಾಂಶ ಯುಕ್ತ ಆಹಾರ ಬೇಯಿಸಿ ಬಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಇದರ ಆಧಾರದಲ್ಲೇ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಸಾವಿರಾರುಕೋಟಿ ವೆಚ್ಚ ಮಾಡಿ, ಶಾಲಾ ಅಂಗಳದಲ್ಲಿ ಅಡುಗೆಕೋಣೆ ನಿರ್ಮಾಣ, ಪಾತ್ರೆಗಳು, ಅಡುಗೆ ತಯಾರಿಕೆಗೆ ಗ್ಯಾಸ್ ಖರೀದಿಸಿ ಬಳಸಲಾಗುತ್ತಿದೆ. ಬಿಸಿಯೂಟ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಿ, ಸರ್ಕಾರವೇ ಮೇಲ್ವಿಚಾರಣೆ ನಡೆಸುತ್ತಿದೆ. ಬಿಸಿಯೂಟದಲ್ಲಿ ಅಡುಗೆಯವರು ಎಸ್ಎಸ್ಎಲ್ಸಿ, ಪಿಯುಸಿ, ಪದವೀಧರರು ಆಗಿರುವುದರಿಂದ ಅವರು ಇದನ್ನು ನಿರ್ವಹಿಸುವ ಅರ್ಹತೆ ಮತ್ತು ಅನುಭವವಿದೆ, ಕ್ಲಸ್ಟರ್ ಕಿಚನ್ ರಚನೆಯಿಂದ ಬಿಸಿಯೂಟ ಯೋಜನೆ ಖಾಸಗಿಕ್ಷೇತ್ರಕ್ಕೆ ವಹಿಸುವ ಹುನ್ನಾರವಾಗಿದೆ. ಕಳೆದ ೪ ತಿಂಗಳಿಂದ ವೇತನ ನೀಡಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡಬೇಕು, ಯಾವುದೇ ಕಾರಣಕ್ಕೂ ರಾಜ್ಯಸರ್ಕಾರ ಕ್ಲಸ್ಟರ್ ಕಿಚನ್ ರಚನೆಗೆ ಮುಂದಾಗಬಾರದು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಸರಸ್ವತಿ, ಪ್ರಧಾನ ಕಾರ್ಯದರ್ಶಿ ಪದ್ಮ, ಖಜಾಂಚಿ ತಾರಕುಮಾರಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷೆ ಮಹದೇವಮ್ಮ, ಯಳಂದೂರು ಘಟಕದ ಸುಂದ್ರಮ್ಮ, ಕೊಳ್ಳೇಗಾಲ ಘಟಕದ ಶಿವಮ್ಮ, ಜ್ವಾಲಾಮುಖಿ, ಕವಿತಾ, ಚನ್ನಂಜಮ್ಮ, ಸುಂದ್ರಮ್ಮ, ಲತಾ, ಸುಶೀಲ, ಲೀಲಾವತಿ, ಪಾರ್ವತಮ್ಮ, ಮೀನಾಕ್ಷಿ ಸೇರಿದಂತೆ ಜಿಲ್ಲೆಯ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಿಸಿಯೂಟ ನೌಕರರು ಭಾಗವಹಿಸಿದ್ದರು.
-------------------೧೬ಸಿಎಚ್ಎನ್೧
ಬಿಸಿಯೂಟ ಜವಾಬ್ದಾರಿ ಕ್ಲಸ್ಟರ್ ಕಿಚನ್ಗೆ ವಹಿಸುವ ಕ್ರಮ ವಿರೋಧಿಸಿ ಚಾಮರಾಜನಗರದಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.