ಭೀಮಣ್ಣ ಗಜಾಪುರ
ಕೂಡ್ಲಿಗಿ: ಬರಗಾಲಕ್ಕೆ ಹೆಸರುವಾಸಿ ಆಗಿರುವ ಕೂಡ್ಲಗಿ ತಾಲೂಕಿಗೆ ಇದೀಗ ಮತ್ತೊಂದು ತೀವ್ರ ಬರಗಾಲ ಪರಿಸ್ಥಿತಿ ಆವರಿಸಿದೆ. ಹೊಲಗಳಲ್ಲಿ ಬೆಳೆಗಳು ಕಮರಿ ಹೋಗಿದ್ದು, ಉಟ್ಟಬಟ್ಟೆಯಲ್ಲೇ ಮಕ್ಕಳು ಮರಿ ತೊರೆದು ಬಗಲಲ್ಲಿ ಚೀಲ ಹೊತ್ತು ಮಲೆನಾಡು, ಬೆಂಗಳೂರು ಕಡೆಗೆ ದುಡಿಯಲು ಹೋಗುತ್ತಿರುವ ದೃಶ್ಯ ನೋಡಿದರೆ ಎಂತವರ ಕರುಳು ಚುರ್ ಅನ್ನದೇ ಇರದು.ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರುಣಿಸುವ ಕಾರ್ಯ ಸಂಪೂರ್ಣ ಮುಗಿದಿದ್ದು, ಈ ಬಾರಿಯಾದರೂ ಬರಡು ಕೆರೆಗಳಿಗೆ ನೀರುಣಿಸುವ ಕಾರ್ಯ ಮಾಡಿದರೆ ಗುಳೆ ಹೋಗುವುದನ್ನು ತಪ್ಪಿಸಬಹುದು. ಜೊತೆಗೆ ಅಂತರ್ಜಲ ಹೆಚ್ಚಾಗಿ ಹಿಂಗಾರು ಬೆಳೆಯನ್ನಾದರೂ ಬೆಳೆದು ಮುಂಗಾರು ಬಿತ್ತನೆಗೆ ಮಾಡಿದ ಸಾಲ ತೀರಿಸಲು ರೈತರಿಗೆ ಅನುಕೂಲವಾಗುತ್ತದೆ.
ಈ ಹಿಂದೆ ಬರ ಬಂದಾಗ ತುತ್ತು ಕೂಳಿಗಾಗಿ ಮಕ್ಕಳನ್ನು ಮಾರಿದ ಪ್ರಸಂಗವನ್ನು ನಮ್ಮ ಜನಪದರು ಜಾನಪದ ಗೀತೆಗಳ ಮೂಲಕ ಹೃದಯಂಗಮವಾಗುವ ಹಾಗೆ ಹಾಡಿರುವ ಹಾಡು ಈಗ ಎಲ್ಲ ರೈತರಿಗೆ ನೆನಪಾಗುತ್ತಿದೆ. ಎಲ್ಲಿಯೂ ಸಾಲ ಹುಟ್ಟುತ್ತಿಲ್ಲ, ಊಟಕ್ಕೆ ಅಕ್ಕಿ ಇದ್ದರೂ ಜೀವನದ ಕಷ್ಟಸುಖಗಳಿಗೆ ಹಣ ಕೈಯಲ್ಲಿ ಇಲ್ಲ. ಹೀಗಾಗಿ ಬದುಕೇ ಬೇಸರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಳೆ ಬಾರದಿದ್ದರೂ ಕೆರೆಗಳಿಗೆ ನೀರು ತುಂಬಿದರೆ ಹಿಂಗಾರು ಬೆಳೆಗೆ ಕೊಳೆವೆಬಾವಿಗಳಿಗೆ ನೀರು ಹರಿದು ಜಮೀನುಗಳಲ್ಲಿ ಹಸಿರು ಕಾಣಲು ಸಾಧ್ಯವಾಗುತ್ತದೆ.2025ರ ನವೆಂಬರ್ 9ರಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಕೆರೆಗಳಿಗೆ ನೀರು ತುಂಬಿಸಲು ಅದು ಸೂಕ್ತ ಸಮಯ ಅಲ್ಲ ಅಂತ ಶಾಸಕರು ಹೇಳಿದ್ದರು. ಆದರೆ ಈಗ ಆ ಸಮಯ ಬಂದಿದೆ. ಈ ವಾರದಲ್ಲೇ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಬಂದರೆ ರೈತರ ಬದುಕು ಇದ್ದುದರಲ್ಲಿಯೇ ಹಸನಾಗುತ್ತದೆ ಎಂಬುದು ಇಲ್ಲಿಯ ರೈತರ ಅಭಿಪ್ರಾಯ. 2021ರಲ್ಲಿ ಆಗಿನ ಕೂಡ್ಲಿಗಿ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರ ದೂರದೃಷ್ಟಿಯ ಫಲವಾಗಿ ಈ ಯೋಜನೆ ಜಾರಿಗೆ ಬಂದಿದ್ದು, ಈಗಿನ ಕೂಡ್ಲಿಗಿ ಶಾಸಕರ ಅವಧಿಯಲ್ಲಿ ಲೋಕಾರ್ಪಣೆಯಾಯಿತು. ಆದರೂ ತಾಲೂಕಿನ 80ಕ್ಕೂ ಹೆಚ್ಚು ಕೆರೆಗಳಿಗೆ ನೀರುಣಿಸಲು ಸಾಧ್ಯವಾಗಿರಲಿಲ್ಲ. ಈಗ ತುಂಗಭದ್ರೆಯಲ್ಲಿ ನೀರು ಹರಿಯುತ್ತಿದೆ. ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಾಲೂಕಿನ ಕೆರೆಗಳಿಗೆ ನೀರು ಹರಿಸಿ ಹೀರೋ ಆಗಬೇಕಿದೆ.
ಕೂಡ್ಲಿಗಿಯಲ್ಲಿ ಬರದ ತೀವ್ರತೆ ಹೆಚ್ಚಿದೆ. ತುಂಗಾಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಆದಷ್ಟು ಬೇಗನೆ ತಾಲೂಕಿನ ಕೆರೆಗಳಿಗೆ ನೀರುಣಿಸುವ ಕಾರ್ಯ ಮಾಡಲಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್.
ಈ ಬಾರಿ ತುಂಗಾ ಜಲಾಶಯದಿಂದ ನೀರು ನದಿಗೆ ಹರಿಯುವುದರಿಂದ ಹಡಗಲಿ ಹತ್ತಿರದ ಸಿಂಗಟಾಲೂರು ಬ್ಯಾರೇಜ್ ತುಂಬಿದೆ. ಹೀಗಾಗಿ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರುಣಿಸುವ ಕಾರ್ಯ ನಡೆಯಲಿದೆ ಎನ್ನುತ್ತಾರೆ ಸಿಂಗಟಲೂರು ಏತ ನೀರಾವರಿ ಯೋಜನೆಯ ಎಇಇ ಎಚ್.ಸಿ.ರಾಘವೇಂದ್ರ.
ಕೂಡ್ಲಿಗಿ ತಾಲೂಕಿನಲ್ಲಿ ರೈತರ ಬದುಕು ಅಧೋಗತಿಯಾಗಿದೆ. ಜೀವನ ಸಾಗಿಸಲು ಆಗುತ್ತಿಲ್ಲ. ಲಕ್ಷಗಟ್ಟಲೇ ಸಾಲ ಮಾಡಿ ದುಬಾರಿ ಬಿತ್ತನೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲದೇ ಬೆಳೆಗಳು ಸುಟ್ಟು ಹೋಗಿವೆ. ಈಗ ಕೆರೆಗಳಿಗೆ ನೀರು ಬಂದರೆ ಪಂಪ್‌ಸೆಟ್‌ಗಳಲ್ಲಿ ಅಂತರ್ಜಲ ಹೆಚ್ಚಾಗಿ ಮುಂದಿನ ದಿನಗಳಲ್ಲಾದರೂ ನೆಮ್ಮದಿ ಜೀವನ ನಡೆಸಬಹುದು ಎನ್ನುತ್ತಾರೆ ಬಡೇಲಡಕು ರೈತ ಅಂಜಿನಪ್ಪ.