ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕಳೆದ 10 ವರ್ಷಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮಗಳಿಗೆಂದು ನಿರ್ಮಿಸಿದ್ದ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಹೊರವಲಯದ ಬಸವೇಶ್ವರ ದೇವಸ್ಥಾನ ಬಳಿ ನಿರ್ಮಾಣವಾಗಿ ಉದ್ಘಾಟನೆಯ ಭಾಗ್ಯ ಕಾಣದ ಸಮುದಾಯ ಭವನವಿಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಈ ಸಮುದಾಯ ಭವನ ಹರಪನಹಳ್ಳಿ ತಾಲೂಕಾಗಿದ್ದರೂ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅಂದಿನ ಶಾಸಕ ಎಸ್.ವಿ. ರಾಮಚಂದ್ರಪ್ಪನವರ ಪ್ರದೇಶಾಭಿವೃದ್ಧಿ ಅನುದಾನದಿಂದ ಪ್ರಾರಂಭವಾಗಿ ಹೆಚ್ಚಿನ ಅನುದಾನದ ಕೊರತೆಯಿಂದ ಆಮೆಗತಿಯಲ್ಲಿ ಸಾಗಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಕಾಣದೇ ಪಾಳು ಬಿದ್ದಿದೆ.

ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮುದಾಯ ಭವನ ಗಿಡ-ಗಂಟಿಗಳ ಒಳಗೆ ಮುಳುಗಿ ಅನೈತಿಕ ತಾಣವಾಗಿ ಬದಲಾಗಿದೆ. ಕೆರೆಗುಡಿಹಳ್ಳಿ ಗ್ರಾಮ ಮಾತ್ರವಲ್ಲದೇ ಸಮೀಪದಲ್ಲಿರುವ ಹತ್ತಾರು ಗ್ರಾಮಗಳ ಜನರು ಈ ಭವನವನ್ನು ಬಳಸಿಕೊಳ್ಳಬಹುದಾಗಿತ್ತು. ಆದರೆ ಇದೀಗ ಈ ಕಟ್ಟಡ ಯಾರ ಬಳಕೆಗೂ ಬಾರದಂತಾಗಿದೆ.

ಭವನದ ಸುತ್ತ ಗಿಡ-ಗಂಟಿಗಳು ಬೆಳೆದುಕೊಂಡಿವೆ. ಸುತ್ತ ಇರುವ ಕಿಟಕಿಗಳ ಗಾಜು ಒಡೆದು ಹೋಗಿವೆ. ಇದೀಗ ಅನೈತಿಕ ತಾಣವಾಗಿ ಬದಲಾವಣೆಯಾಗಿದೆ. ಎರಡು ಎಕರೆಯಷ್ಟು ಜಾಗದಲ್ಲಿ ಭವನ ನಿರ್ಮಾಣ ಮಾಡಲಾಗಿದೆ. ಜೊತೆಗೆ ಭವನದ ಸುತ್ತ ಸಾಕಷ್ಟು ಜಾಗ ಇದೆ. ಮುಂದೆ ಹರಪನಹಳ್ಳಿ - ಜಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಿದೆ.


ಕುಡುಕರ ಹಾವಳಿ:

ಭವನದ ತುಂಬೆಲ್ಲ ಕುಡುಕರು ಬಿಸಾಡಿರುವ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು, ನೀರಿನ ಖಾಲಿ ಬಾಟಲಿಗಳು ಚೆಲ್ಲಾಡಲಾಗಿದೆ. ಉದ್ಘಾಟನೆ ಹಂತಕ್ಕೆ ಸಿದ್ಧವಾದ ಮೇಲೆ ಒಳಗಡೆ ಅಲ್ಲಲ್ಲಿ ಕೆಲ ವಿದ್ಯುತ್ ಸಾಮಗ್ರಿಗಳನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಅವೆಲ್ಲ ರಾತ್ರೋ ರಾತ್ರಿ ಕಳ್ಳತನ ಮಾಡಿದ್ದಾರೆ. ಆದರೂ ಸ್ಥಳೀಯ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅರಸೀಕೆರೆ ವ್ಯಾಪ್ತಿಯ ಏಳು ಗ್ರಾಪಂಗಳು ನನ್ನ ವ್ಯಾಪ್ತಿಗೆ ಸೇರಿವೆ. ಆದರೆ ಕೆರೆ ಗುಡಿಹಳ್ಳಿ ಸಮುದಾಯ ಭವನ ಪಾಳು ಬಿದ್ದಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆದರೆ ಇಲ್ಲಿ ಹಣದ ಪೂರೈಕೆಯಲ್ಲಿ ಪೋಲಾಗಿದೆ ಎಂಬ ಮಾಹಿತಿ ಇತ್ತು. ಅದನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ. ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಕಟ್ಟಡವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚನೆ ನೀಡುತ್ತೇನೆ ಎನ್ನುತ್ತಾರೆ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ.

ಶಾಸಕರ ವಿಶೇಷ ಅನುದಾನ, ಜಿಪಂ, ತಾಪಂ, ಸಮಾಜ ಕಲ್ಯಾಣ ಇಲಾಖೆ ಅನುದಾನದಿಂದ ಹಾಗೂ ಸ್ಥಳೀಯ ರೈತರ ದೇಣಿಗೆಯಿಂದ ಕಾಮಗಾರಿ ಉದ್ಘಾಟನೆ ಹಂತಕ್ಕೆ ಬಂದಿದೆ. ಆದರೆ ಆಡಳಿತ ಮಂಡಳಿ ಅನುಮಾನಾಸ್ಪದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಅನುದಾನ ಪೋಲು ಮಾಡಿ ಇದೀಗ ಲೆಕ್ಕಚಾರ ನೀಡದೆ, ಉದ್ಘಾಟನೆ ಮಾಡದೇ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್.

ಸಮುದಾಯ ಭವನದಕ್ಕೆ ಇನ್ನಷ್ಟು ಅನುದಾನ ಬೇಕಿದ್ದು ಮೇಲಿನ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಶೀಘ್ರದಲ್ಲಿ ಹಣ ಬಿಡುಗಡೆಯ ಭರವಸೆ ನೀಡಿದ್ದು, ಆದಷ್ಟು ಬೇಗ ಉದ್ಘಾಟನೆ ಮಾಡುತ್ತೇವೆ ಎನ್ನುತ್ತಾರೆ ಭೂ ಸೇನಾ ನಿಗಮದ ಎಂಜಿನಿಯರ್ ಜಯನಾಯ್ಕ್.