ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಈ ದಿನ ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸಿ, ಜೋಡಿ ಎತ್ತುಗಳ ಸೇವೆಯನ್ನು ಸ್ಮರಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಮಣ್ಣಿನ ಎತ್ತುಗಳ ಜಾಗವನ್ನು ಈಗ ಪಿಒಪಿ ಎತ್ತುಗಳು ಆಕ್ರಮಿಸಿವೆ.ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಮಣ್ಣಿನ ಮತ್ತು ಪಿಒಪಿ ಎತ್ತುಗಳ ಮಾರಾಟ ಜೋರಾಗಿದೆ. ಒಂದೆಡೆ ದಿನಗಟ್ಟಲೆ ಶ್ರಮಪಟ್ಟು ಮಣ್ಣಿನ ಎತ್ತುಗಳನ್ನು ತಯಾರಿಸಿದ ಕುಂಬಾರರು ಗ್ರಾಹಕರಿಗಾಗಿ ಕಾದು ಕುಳಿತಿದ್ದರೆ, ಮತ್ತೊಂದೆಡೆ ಬಣ್ಣಬಣ್ಣದ, ಹೊಳಪಿನ ಪಿಒಪಿ ಎತ್ತುಗಳು ಖರೀದಿದಾರರ ಗಮನ ಸೆಳೆಯುತ್ತಿವೆ.
ಪಿಒಪಿಗೇ ಜನರ ಒಲವು: ಮಣ್ಣಿನ ಎತ್ತುಗಳ ಒಂದು ಜೋಡಿಗೆ ಕೇವಲ ₹50 ದರವಿದ್ದರೆ, ಪಿಒಪಿ ಎತ್ತುಗಳ ಜೋಡಿಗೆ ₹200ರಿಂದ ₹300ರ ವರೆಗೆ ಬೆಲೆ ಇದೆ. ಬೆಲೆಯಲ್ಲಿ ನಾಲ್ಕು ಪಟ್ಟು ವ್ಯತ್ಯಾಸವಿದ್ದರೂ ಗ್ರಾಹಕರು ಪಿಒಪಿ ಎತ್ತುಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆಕರ್ಷಕ ಬಣ್ಣ, ಹೊಳಪು, ವಿವಿಧ ವಿನ್ಯಾಸಗಳು ಹಾಗೂ ವರ್ಷಗಳ ವರೆಗೆ ಉಳಿಸಿಕೊಳ್ಳಬಹುದಾದ ಗುಣವೇ ಪಿಒಪಿ ಎತ್ತುಗಳ ಜನಪ್ರಿಯತೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.ಇತಿಹಾಸದ ಪುಟಕ್ಕೆ ಮಣ್ಣೆತ್ತು!: ಮಣ್ಣೆತ್ತಿನ ಅಮಾವಾಸ್ಯೆ ಎಂಬ ಹೆಸರಿನಲ್ಲೇ ಮಣ್ಣಿನ ಮಹತ್ವ ಅಡಗಿದೆ. ಆದರೆ ಮಣ್ಣಿನ ಎತ್ತುಗಳೇ ಕಣ್ಮರೆಯಾಗುತ್ತಿರುವುದು ಈ ಹಬ್ಬದ ಮೂಲ ಆಶಯವನ್ನೇ ಮರೆಸುವಂತೆ ಮಾಡುತ್ತಿದೆ. ಸ್ಥಳೀಯ ಕುಂಬಾರರ ಕೈಚಳಕಕ್ಕೆ ಪ್ರೋತ್ಸಾಹ ನೀಡುವುದು, ಪರಿಸರಸ್ನೇಹಿ ಮಣ್ಣಿನ ಎತ್ತುಗಳನ್ನು ಖರೀದಿಸುವುದು ಹಾಗೂ ಮಕ್ಕಳಲ್ಲಿ ಈ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ಮಣ್ಣೆತ್ತಿನ ಅಮಾವಾಸ್ಯೆ ಎಂಬ ಹೆಸರು ಮಾತ್ರ ಉಳಿದು, ಮಣ್ಣಿನ ಎತ್ತುಗಳು ಹಾಗೂ ಅವುಗಳನ್ನು ರೂಪಿಸುವ ಕುಂಬಾರರ ಕಲೆ ಇತಿಹಾಸದ ಪುಟಗಳಿಗೆ ಸೇರಿಬಿಡುವ ಅಪಾಯ ಎದುರಾಗಿದೆ.
ಸಂಸ್ಕೃತಿ ಉಳಿಸಲು: ಪಿಒಪಿ ಎತ್ತುಗಳು ಆಕರ್ಷಕ ಬಣ್ಣ, ವಿವಿಧ ವಿನ್ಯಾಸ ಹಾಗೂ ಹೆಚ್ಚು ಬಾಳಿಕೆ ಹೊಂದಿರುವುದರಿಂದ ಗ್ರಾಹಕರು ಅವುಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಬೆಲೆ ಹೆಚ್ಚಿದ್ದರೂ ಪಿಒಪಿ ಎತ್ತುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಮಣ್ಣಿನ ಎತ್ತುಗಳ ಮಾರಾಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೂ ನಮ್ಮ ಪೂರ್ವಜರ ಸಂಸ್ಕೃತಿ ಉಳಿಯಬೇಕು ಎಂಬ ಉದ್ದೇಶದಿಂದಲೇ ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಕುಷ್ಟಗಿ ಮಣ್ಣೆತ್ತಿನ ವ್ಯಾಪಾರಿ ಸಂಗಪ್ಪ ಕುಂಬಾರ ಹೇಳಿದರು.
ಪ್ರೋತ್ಸಾಹ ನೀಡಬೇಕು: ಮಣ್ಣೆತ್ತಿನ ಅಮಾವಾಸ್ಯೆ ನಮ್ಮ ಕೃಷಿ ಸಂಸ್ಕೃತಿ ಮತ್ತು ಪರಿಸರ ಜಾಗೃತಿಯ ಸಂಕೇತವಾಗಿದೆ. ಪಿಒಪಿ ಎತ್ತುಗಳ ಬಳಕೆಯಿಂದ ಸ್ಥಳೀಯ ಕುಂಬಾರರ ಬದುಕಿಗೆ ಹೊಡೆತ ಬೀಳುವ ಜತೆಗೆ ಪರಿಸರಕ್ಕೂ ಹಾನಿಯಾಗುತ್ತದೆ. ಸಂಪ್ರದಾಯ ಉಳಿಯಬೇಕಾದರೆ ಜನರು ಪರಿಸರಸ್ನೇಹಿ ಮಣ್ಣಿನ ಎತ್ತುಗಳನ್ನು ಖರೀದಿಸಿ ಸ್ಥಳೀಯ ಕುಂಬಾರರ ಕೈಚಳಕಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕುಷ್ಟಗಿಯ ಶಾರದಾ ಶೆಟ್ಟರ್ ಹೇಳಿದರು.