ಕುಕನೂರು: ಪಟ್ಟಣದ ಗುದ್ನೇಪ್ಪನಮಠದಲ್ಲಿ ಮಳೆಗಾಗಿ ೭ ದಿನಗಳ ಸಪ್ತ ಭಜನೆಯನ್ನು ಗ್ರಾಮದ ಭಕ್ತರು ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದರ್ಶನ ಪಡೆದು, ಅಲ್ಲಿಂದ ಐದು ಬಿಂದಿಗೆ ತುಂಗಭದ್ರಾ ನದಿಯ ಗಂಗಾಜಲವನ್ನು ಪಾದಯಾತ್ರೆಯ ಮೂಲಕ ಪಟ್ಟಣದ ಗುದ್ನೇಪ್ಪನಮಠಕ್ಕೆ ತಂದಿದ್ದಾರೆ. ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಮಳೆಬೀಳದೆ ಇರುವುದರಿಂದ ರೈತರಿಗೆ, ಜಾನುವಾರುಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಳೆಯಾದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಸಪ್ತ ಭಜನೆ ಹಮ್ಮಿಕೊಂಡಿದ್ದಾರೆ.

ಭಕ್ತರಾದ ವೀರಯ್ಯ ಜಡಿ, ಶಿವಯ್ಯ ಬ್ಯಾಳಿ, ಚನ್ನಬಸಯ್ಯ ಗಲಬಿ, ಬಸಯ್ಯ ಹುಣಸಿಮರ, ಮುದುಕಪ್ಪ ಗರ್ಬಿ, ಈರಣ್ಣ ಇಟಗಿ, ಗುದ್ನೇಯ್ಯ ಪೂಜಾರ, ವೀರೇಶ ಬ್ಯಾಳಿ, ಮಂಜುನಾಥ ಬಂಡಿ, ಕಲ್ಲಯ್ಯ ವಿರೂಪಣ್ಣವರ್, ವಿಶ್ವನಾಥ ಬಂಡಿ ಭಕ್ತರು ಇದ್ದರು.

ಮೇಘರಾಜನ ಪ್ರಾರ್ಥಿಸಿ ಮಳೆರಾಯನ ಪದ ಹಾಡುವ ಮಕ್ಕಳು:

ಮಳೆಗಾಗಿ ಪ್ರಾರ್ಥಿಸಿ ಮನೆ-ಮನೆಗೆ ತೆರಳಿದ ಕನಕಗಿರಿ ಪಟ್ಟಣದ 11ನೇ ವಾರ್ಡ್‌ನ ಚಿಕ್ಕಮಕ್ಕಳು ಮಳೆರಾಯ ಪದಗಳನ್ನಾಡಿ ಮೇಘರಾಜನ ಮೊರೆ ಹೋಗಿದ್ದಾರೆ.ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರಾ, ಆರಿದ್ರ ಮತ್ತು ಪೂನರ್ವಸು ಹೀಗೆ ಈ ವರ್ಷದ ಎಲ್ಲ ಮಳೆಗಳು ಬಾರದೇ ರೈತನ ಬದುಕು ಕಂಗಾಲಾಗಿದೆ. ಹೊಲ, ತೋಟಗಳು ಅಚ್ಚ ಹಸಿರಿನಿಂದ ಕಂಗೊಳಿಸಬೇಕಾದ ಪ್ರಸ್ತುತ ದಿನಗಳಲ್ಲಿ ಬಿತ್ತನೆ ಮಾಡಿದ ಪೈರುಗಳು ಒಣಗಿ ಹೋಗಿದ್ದು, ತೀವ್ರ ಗಾಳಿಗೆ ನೆಲಕಚ್ಚಿವೆ. ಮುಂಗಾರು ಹಂಗಾಮಿ ಮಳೆ ಮುಗಿಯುತ್ತಾ ಬಂದರೂ ಇದುವರೆಗೂ ಮಳೆಯಾಗದಿರುವುದಕ್ಕೆ ರೈತ ಚಿಂತಾಕ್ರಾಂತನಾಗಿದ್ದು, ತಾಲೂಕಿನೆಲ್ಲೆಡೆ ದೇವರ ಹೋಗುತ್ತಿದ್ದಾರೆ.ಮಳೆರಾಯನ ಆಗಮನಕ್ಕಾಗಿ ಚಿಕ್ಕಮಕ್ಕಳು ಮಡಿ ಮಾಡಿಕೊಂಡು ಮೇಘರಾಜನ ಪದ ಮನೆ-ಮನೆಗೆ ತೆರಳಿ ಹಾಡುತ್ತಿದ್ದಾರೆ. ಹೀಗೆ ಸಾಮೂಹಿಕವಾಗಿ ಸೇರಿದ ಮಕ್ಕಳು ಕೊಪ್ಪವ ನೀಲೇ, ಕೊಪ್ಪಲಕ್ಕ ನೀಲೆ, ಜಾಜಾ ನೀಲೇ, ಜರಿಯೇ ಮಳೆಯೇ ಎನ್ನುವ ಪದ ಅನಾದಿ ಕಾಲದಿಂದಲೂ ಜನಜನಿತವಾಗಿರುವ ಈ ಹಾಡು ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿದೆ. ಇಂತಹ ಪದಗಳನ್ನು ಬರ ಆವರಿಸಿದಾಗ ಚಿಕ್ಕಮಕ್ಕಳಿಂದ ಮಣ್ಣಿನ ಮಡಿಕೆಯೊಂದರಲ್ಲಿ ಕಪ್ಪೆ ಹಾಕಿ ಅದರಲ್ಲಿ ಅವರೆ ತಪ್ಪಲು, ನಾನಾ ಬಗೆ ಹೂಗಳನ್ನು ಇರಿಸಿ ಮನೆ-ಮನೆಗೆ ತೆರಳಿ ಪೂಜೆ ಸಲ್ಲಿಸಿ ನೆನೆಯುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಚಿಕ್ಕಮಕ್ಕಳು ನಡೆಸುತ್ತಿರುವ ಈ ಸತ್ಕಾರ್ಯಕ್ಕೆ ಹಿರಿಯರು ಹಾಗೂ ವಿವಿಧ ಓಣಿ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.