ಮುಂಡರಗಿ: ಇಂದಿನ ದಿನಮಾನದಲ್ಲಿ ಪತ್ರಿಕಾ ರಂಗ ಬಹುವಿಸ್ತಾರವಾಗಿ ಬೆಳೆದು ಕ್ಷಣ ಕ್ಷಣದ ಸುದ್ದಿಗಳು ಕೈಯಲ್ಲಿ ದೊರೆಯುತ್ತವೆ. ಇಂದು ತಾಲೂಕು ಹಂತದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಯಾವುದೇ ರೀತಿಯ ಆದಾಯ ಇರುವುದಿಲ್ಲ. ಆದರೂ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಸರ್ಕಾರ ಪತ್ರಕರ್ತರಿಗೆ ಆರ್ಥಿಕವಾಗಿ ಸಹಾಯ, ಸಹಕಾರ ನೀಡಬೇಕು ಎಂದು ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಕೆ.ಆರ್.ಬೆಲ್ಲದ ಮಹಾವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ, ಕೆ.ಆರ್.ಬೆಲ್ಲದ ಮಹಾವಿದ್ಯಾಲಯ, ಜ.ಅ. ಶಿಕ್ಷಣ ಮಹಾವಿದ್ಯಾಲಯ, ಜ.ಅ.ಪಿಯು ಕಾಲೇಜು ಹಾಗೂ ಎಂ.ಎಸ್. ಡಂಬಳ ಮಹಿಳಾ ಪಿಯು ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

ತಾಲೂಕು ಪತ್ರಕರ್ತರಿಗೆ ಶ್ರೀಮಠದಿಂದ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ₹1 ಲಕ್ಷ ಠೇವಣಿ ಇಟ್ಟಿದ್ದು, ಅದರಿಂದ ಪ್ರತಿವರ್ಷ ತಾಲೂಕಿನ ಒಬ್ಬ ಪತ್ರಕರ್ತನಿಗೆ ₹12 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಶ್ರೀ ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ ನೀಡುತ್ತ ಬರಲಾಗುತ್ತಿದೆ. ಕೆಲವು ವಿಶೇಷವಲ್ಲದ ಸುದ್ದಿಗಳಿಗೆ ಆದ್ಯತೆ ನೀಡಿ, ಅತ್ತುತ್ತಮವಾದ ಸುದ್ದಿಗಳನ್ನು ನಿರ್ಲಕ್ಷಿಸುವುದನ್ನು ಅನೇಕ ಬಾರಿ ಗಮನಿಸಲಾಗಿದೆ. ಅದು ನಿಲ್ಲಬೇಕು. ಜನತೆಗೆ ಪತ್ರಿಕಾ ರಂಗದ ಮೇಲೆ ಹೆಚ್ಚಿನ ಗೌರವ ಇದೆ. ಅದು ಇಮ್ಮಡಿಯಾಗುವಂತೆ ಪತ್ರಿಕೆಗಳು ಕಾರ್ಯನಿರ್ವಹಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮುಂಡರಗಿ ತೋಂಟದಾರ್ಯ ಮಠದ ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಮಾತನಾಡಿ, ಇಂದಿನ ಆಧುನಿಕತೆ ಭರಾಟೆಯಲ್ಲಿ ಜಾತೀಯತೆ, ಧರ್ಮಾಂಧತೆಯಿಂದ ಸತ್ಯ ಎಂಬ ಶಬ್ಧ ವ್ಯಾಪಾರೀಕರಣದಿಂದ ಕೂಡಿದೆ. ಹೀಗಾಗಿ, ಸತ್ಯದ ಮುಖ ಕಾಣಿಸುತ್ತಿಲ್ಲ. ಸತ್ಯದ ಮುಖ ಕಾಣಿಸಬೇಕಿದ್ದರೆ ಬರೆಯುವವರ ಕೈಯಲ್ಲಿ ಸತ್ಯವನ್ನು ತೋರಿಸುವಂತ ಶಕ್ತಿ ಇರಬೇಕು. ಆ ಶಕ್ತಿಯೇ ನಿಜವಾದ ಮಾಧ್ಯಮ. ಮಾಧ್ಯಮ ಎಂಬುವುದು ಇತಿಹಾಸ ಉಳಿಸಿ ಕೊಡುವ ಜ್ಞಾನ ಮತ್ತು ಪರಂಪರೆಯಾಗಿದೆ ಎಂದರು.

ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಪತ್ರಿಕಾ ವರದಿಗಾರಿಕೆ ಕಾರ್ಯ ಹೂವಿನ ಹಾಸಿಗೆಯಲ್ಲ. ಅದು ಕಲ್ಲು-ಮುಳ್ಳಿನ ಹಾದಿಯಾಗಿದೆ. ಗ್ರಾಮೀಣ ಪ್ರದೇಶದಿಂದ ದೇಶ ಮಟ್ಟದವರೆಗೂ ಸಮಾಜ ಸುಧಾರಿಸುವ ಕಾರ್ಯವನ್ನು ಪತ್ರಕರ್ತರು ತಮ್ಮ ವರದಿಗಳ ಮೂಲಕ ಮಾಡುತ್ತಾರೆ. ಅವರಿಗೆ ಭದ್ರತೆ ಒದಗಿಸುವ ಕಾರ್ಯವನ್ನು ನಮ್ಮ ಸರ್ಕಾರಗಳು ಮಾಡಬೇಕು. ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಇದು ಕೇವಲ ಪತ್ರಿಕಾ ದಿನಾಚರಣೆಯಾಗದೇ ಪತ್ರಕರ್ತರು ಆತ್ಮಾವಲೋಕ ಮಾಡಿಕೊಳ್ಳುವ ದಿನವಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗೆ ಏರಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಎಲ್ಲರೂ ನಿತ್ಯ ಪತ್ರಿಕೆಗಳನ್ನು ಓದಬೇಕು ಎಂದರು.


ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಜಿಲ್ಲಾ ಪ್ರ.ಕಾರ್ಯದರ್ಶಿ ಶರಣು ದೊಡ್ಡೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕವಿ ಬಂಕಾಪುರ ಅವರಿಗೆ ₹12 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಶ್ರೀ ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಕವಿ ಬಂಕಾಪುರ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಹೊಂಬಳಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕ ಬಸನಗೌಡ ಗೌಡರ ಅವರನ್ನು

ಸನ್ಮಾನಿಸಲಾಯಿತು.

ಬಸವಾನಂದ ಸ್ವಾಮೀಜಿ, ಅರುಣಕುಮಾರ ಹಿರೇಮಠ, ಸಂತೋಷ ಮುರಡಿ, ಕಾಶೀನಾಥ ಬಿಳಿಮಗ್ಗದ, ಶರಣು ಸೊಲಗಿ, ಮಲ್ಲಿಕಾರ್ಜುನ ಪಾಟೀಲ, ವಿಜಯ ಸೊರಟೂರ, ರಿಯಾಜ್‌ಅಹ್ಮದ ದೊಡ್ಡಮನಿ ಉಪಸ್ಥಿತರಿದ್ದರು. ಪತ್ರಕರ್ತರಾದ ಸಿ.ಕೆ. ಗಣಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಎಚ್.ಬಿ. ವಡ್ಡಟ್ಟಿ ಸ್ವಾಗತಿಸಿದರು. ಸಿ.ಎಸ್.ಅರಸನಾಳ ನಿರೂಪಿಸಿದರು. ಶಿವಮೂರ್ತಿ ಹೊಂಬಳಗಟ್ಟಿ ವಂದಿಸಿದರು.

ಸರ್ಕಾರ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನೇಕ ರೀತಿಯಲ್ಲಿ ಹಣಕಾಸಿನ ನೆರವನ್ನು ನೀಡುತ್ತಿದ್ದು, ಯಾವುದೇ ರೀತಿಯ ಫಲಾಪೇಕ್ಷ ಇಲ್ಲದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ತಾಲೂಕು ಮಟ್ಟದ ಪತ್ರಕರ್ತರಿಗೆ ಅವರ ಕುಟುಂಬ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಗೌರವ ಧನವನ್ನು ನಿಗದಿ ಮಾಡಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.