ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕಳೆದ ನಾಲ್ಕು ದಿನಗಳ ಹಿಂದಷ್ಟೇ (ಕಳೆದ ಸೋಮವಾರ) ಹಾವೇರಿ ಮೂಲದ ಕೃಷಿ ಕಾರ್ಮಿಕನೊಬ್ಬ ಕಾಡಾನೆ ದಾಳಿಗೆ ಬಲಿಯಾದ ಘಟನೆ ಮಾಸುವ ಮುನ್ನವೇ ಭಾನುವಾರ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಕಾಡಾನೆ ಬಲಿ ಪಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹ್ಯಾರಂಬಿಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗ್ಯದ್ಲಘಟ್ಟದ ಕೃಷಿ ಮಹಿಳೆ ಬೋರಮ್ಮ (40) ಮೃತ ದುರ್ದೈವಿ. ಭಾನುವಾರ ಬೆಳಗ್ಗೆ ಎಂದಿನಂತೆ ಗ್ರಾಮದ ನಾಗೇಶ್ ಗೌಡ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೆ ದಾಳಿ ನಡೆಸಿದ ಕಾಡಾನೆ, ಬೋರಮ್ಮ ಅವರನ್ನು ತುಳಿದು ಸಾಯಿಸಿತು. ಈ ವೇಳೆ, ಸಹ ಕಾರ್ಮಿಕ ಮೇಸ್ತ್ರಿ ನಾಗರಾಜ್ ಎಂಬುವರು ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.ರೈತರಿಂದ ಪ್ರತಿಭಟನೆ; ಕಲ್ಲು ತೂರಾಟ:

ಈ ಮಧ್ಯೆ, ಆ್ಯಂಬುಲೆನ್ಸ್‌ ನಲ್ಲಿ ಮೃತದೇಹ ಸಾಗಿಸಿದರೆ ಜನರಿಗೆ ಗೊತ್ತಾಗಿ ಜನರ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಕಾರಣಕ್ಕಾಗಿ ಅರಣ್ಯಾಧಿಕಾರಿಗಳು ಮಹಿಳೆಯ ಮೃತದೇಹವನ್ನು ಟಾರ್ಪಲ್‌ನಲ್ಲಿ ಸುತ್ತಿ ಲಗೇಜ್ ಆಟೋದಲ್ಲಿ ಕೊಂಡೊಯ್ದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ವಿಷಯ ತಿಳಿದ ರೈತ ಒಕ್ಕೂಟದ ಕಾರ್ಯಕರ್ತರು, ಮಾಜಿ ಸಚಿವ ಡಿ.ಎನ್.ಜೀವರಾಜ್‌ ಮತ್ತಿತರರು ಕಡಬಗೆರೆ ಬಳಿ ಲಗೇಜ್ ಆಟೋ ಅಡ್ಡಗಟ್ಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶವವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು. ಸರಕಾರ ಅವರ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ಕೊಡುವುದರ ಜತೆಗೆ ಅವರ ಪುತ್ರನಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಶಿಕ್ ಎಂಬ ಯುವಕ ಟೈರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಆತನನ್ನು ತಡೆದರು. ಇದೇ ವೇಳೆ, ಪುರ, ಹ್ಯಾರಂಬಿಯಲ್ಲಿ ಕಾಡಾನೆ ಸೆರೆ ಹಿಡಿದ ಸಿಬ್ಬಂದಿ, ಅಧಿಕಾರಿಗಳ ಜತೆಗೆ ಶಾಸಕ ಟಿ.ಡಿ.ರಾಜೇಗೌಡರು ಸಂಭ್ರಮಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಪ್ರತಿಭಟನಾಕಾರರ ಆಕ್ರೋಶ ಇಮ್ಮಡಿಸಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದರು. ಈ ವೇಳೆ ಇಬ್ಬರು ಗಾಯಗೊಂಡರು.


ಬಳಿಕ, ಶಾಸಕರು ಸ್ಥಳಕ್ಕೆ ಆಗಮಿಸಿ, 20 ಲಕ್ಷ ರೂ.ಗಳ ಪರಿಹಾರದ ಚೆಕ್‌ ವಿತರಿಸಿದರು. ಘಟನೆ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು. ನಂತರ, ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಯಿತು.

ಈ ಮಧ್ಯೆ, ಘಟನೆ ಖಂಡಿಸಿ, ಮಲೆನಾಡು ನಾಗರೀಕ ರಕ್ಷಣಾ ವೇದಿಕೆ ಮತ್ತು ರೈತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಶೃಂಗೇರಿ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

ಸಾವಾದ ತಕ್ಷಣ ಕಾಡಾನೆ ಸೆರೆ!:

ಮಹಿಳೆ ಸಾವಿನ ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆ ಚುರುಕುಗೊಳಿಸಿದ ಅಧಿಕಾರಿಗಳು, ಅರ್ಧ ಗಂಟೆಯಲ್ಲಿಯೇ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬೆಳಗ್ಗೆ ಎಂಟೂವರೆಗೆ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದರೆ, ಒಂಬತ್ತೂವರೆಗೆ ಪುರ, ಬೆರಣಗೋಡಿನಲ್ಲಿ ಕಾಡಾನೆ ಸೆರೆಯಾಗಿದೆ.

ವ್ಯಕ್ತಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾಡಾನೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ತಪ್ಪಿಸಿಕೊಂಡಿತ್ತು. ಅದಕ್ಕೆ ಎರಡು ಉದ್ದದ ದಂತಗಳಿದ್ದವು ಎನ್ನಲಾಗುತ್ತಿದ್ದು, ಭಾನುವಾರ ಸೆರೆ ಹಿಡಿದ ಕಾಡಾನೆಯ ದಂತಗಳ ತುದಿ ತುಂಡರಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.