ಗದಗ: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಕುಟುಂಬಕ್ಕೆ ಆಗಿರುವ ಅನ್ಯಾಯ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಮಹರ್ಷಿ ಭಗೀರಥ ಉಪ್ಪಾರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಉಪ್ಪಾರ ಸಮಾಜದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಶಿವಣ್ಣ, ನಾಗರತ್ನ, ರಕ್ಷಿತಾ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ವಿವರವಾದ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಸಾವಿಗೆ ಉಲ್ಲಾಸಗೌಡ ಎಂಬ ಕೀಚಕನ ಹೀನಕೃತ್ಯದಿಂದ ಮನನೊಂದು ಬಡ ಕುಟುಂಬ ಬಲಿಯಾಗಿದೆ. ಮದುವೆ ಸಂಭ್ರಮದಲ್ಲಿರಬೇಕಾದ ಕುಟುಂಬ, ಉಲ್ಲಾಸಗೌಡನ ಕ್ರೌರ್ಯದಿಂದ ಮರ್ಯಾದೆಗೆ ಅಂಜಿ ಮಸಣ ಸೇರಿದ್ದಾರೆ. ಕೂಡಲೇ ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಎಂದು ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಯ ಮಸಣಾಪುರ ಎಂಬ ಗ್ರಾಮದಲ್ಲಿ ಉಪ್ಪಾರಶೆಟ್ಟರ್ ಚಂದ್ರು ಎಂಬ ಯುವಕನನ್ನು ದುರುದ್ದೇಶದಿಂದ ಅನ್ಯ ಕೋಮಿನವರು ಕಂಬಕ್ಕೆ ಕಟ್ಟಿಹಾಕಿ ಅರಬೆತ್ತಲೆಗೊಳಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ದುರುದ್ದೇಶದಿಂದ ಫ್ರೀ ಪ್ಲಾನ್ ಮಾಡಿಕೊಂಡು ಬೆಳಗಿನ ಜಾವ ಕೆಲಸಕ್ಕೆ ಹೋಗುವ ವೇಳೆ ಹಿಡಿದು ಕಟ್ಟಿಹಾಕಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು.ಈ ವೇಳೆ ಜಿಲ್ಲಾಧ್ಯಕ್ಷ ಭೀಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಗದ್ದಿ, ಉಪಾಧ್ಯಕ್ಷ ಹನುಮಂತ ಗೊಟಗೊಂಡ, ಶಿವಪುತ್ರಪ್ಪ ಕುಂದ್ರಳ್ಳಿ, ಮಹಾದೇವಪ್ಪ ಪ್ಯಾಟಿ, ಸದಸ್ಯರಾದ ಪಾಂಡುರಂಗ ಕನಕಾಪೂರ, ಚನ್ನಪ್ಪ ಹಸರಂಬಿ, ಶಿವರಾಜ ಉಪ್ಪಾರ, ಹನುಮಂತ ತೆಂಗುಂಟಿ, ಸಂತೋಷ ಉಪ್ಪಾರ, ಬಸವಣ್ಣೆಪ್ಪ ಉಪ್ಪಾರ ಇದ್ದರು.