ಮುಂಡರಗಿ: ತಾಯಿ ಎಂದರೆ ಅವಳೊಬ್ಬ ತ್ಯಾಗಮಯ ಜೀವಿ. ತಾಯಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಜಗತ್ತಿನಲ್ಲಿ ತಾಯಿ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಸೋಮವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಶಿವಾನುಭವ ಸಮಿತಿ, ಶ್ರೀ ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದ ಸುವರ್ಣ ಮಹೋತ್ಸವ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಅವ್ವನ ಕುರಿತು ವಿಶೇಷ ಉಪನ್ಯಾಸ, 1848ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದರು.
ನಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ, ಜೋಪಾನ ಮಾಡಿ, ಮನುಷ್ಯರನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರ ಅತ್ಯಂತ ಹಿರಿದಾಗಿರುತ್ತದೆ. ಅಂತಹ ತಂದೆ- ತಾಯಿಯನ್ನು ಅವರ ಕೊನೆಗಾಲದಲ್ಲಿ ಉತ್ತಮವಾಗಿ ಜೋಪಾನ ಮಾಡುವ ಮೂಲಕ ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದು ಎಲ್ಲ ಮಕ್ಕಳ ಕರ್ತವ್ಯವಾಗಿದೆ ಎಂದರು.ನಮ್ಮ ತಾಯಿ ಗುರವ್ವ ಹೊರಟ್ಟಿಯವರ ನೆನಪಿನಲ್ಲಿ ಅವ್ವ ಸೇವಾ ಟ್ರಸ್ರ್ ಪ್ರಾರಂಭಿಸಿ, ಡಾಕ್ಟರ್, ಎಂಜಿನಿಯರ್ ಸೇರಿದಂತೆ ಅನೇಕ ಕೋರ್ಸುಗಳನ್ನು ಓದುವ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಾಗಿದೆ, ಅನೇಕ ವಿಶೇಷಚೇತನರಿಗೆ ವಾಹನ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದ್ದು, ಅಪ್ಪ ಶಿವಲಿಂಗಪ್ಪ ಹೊರಟ್ಟಿ ಹೆಸರಿನಲ್ಲಿ ನನ್ನ ಹುಟ್ಟೂರು ಯಡಹಳ್ಳಿಯಲ್ಲಿ ಸರ್ಕಾರಿ ಶಾಲೆ ಪ್ರಾರಂಭಿಸಿ ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ. ಪಾಲಕರು ಮಕ್ಕಳಿಗೆ ಅಪ್ಪ, ಅವ್ವ, ಅಜ್ಜ, ಅಮ್ಮ ಹೀಗೆ ಹಿರಿಯರಿಗೆ ಗೌರವದಿಂದ ಕಾಣುವ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದರು. ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಗೌ. ಕಾರ್ಯದರ್ಶಿ ಶಶಿ ಸಾಲಿ, ಗದಗ ಜಿಲ್ಲಾ ಸಂಚಾಲಕ ಡಾ. ಬಸವರಾಜ ಧಾರವಾಡ ಅವ್ವ ಸೇವಾ ಟ್ರಸ್ಟ್‌ನಿಂದ ಜರುಗುತ್ತಿರುವ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಕಳೆದ 50 ವರ್ಷದಿಂದ ಅಕ್ಕನ ಬಳಗದ ಎಲ್ಲ ತಾಯಂದಿರು ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ನಮ್ಮ ಅನೇಕ ಗ್ರಂಥಗಳಿಗೆ, ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಜ.ಅ. ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೂ ಸಹ ಧನಸಹಾಯ ಮಾಡಿದ್ದಾರೆ. ಅವರೆಲ್ಲರ ಕಾರ್ಯ ಮೆಚ್ಚುವಂತದ್ದು. ಅವ್ವ ಸೇವಾ ಟ್ರಸ್ಟ್ ಮೂಲಕ ಬಸವರಾಜ ಹೊರಟ್ಟಿಯವರು ಅನೇಕ ಸಮಾಜೋಧಾರ್ಮಿಕ ಕಾರ್ಯ ಮಾಡುತ್ತಾ ಬಂದಿದ್ದು, ಅನೇಕ ಮಠ ಮಾನ್ಯಗಳಿಗೆ, ಪತ್ರಕರ್ತರಿಗೆ ದತ್ತಿ ನಿಧಿಗಳನ್ನು ಸಹ ನೀಡಿದ್ದಾರೆ. ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದರು.ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷ ಲಕ್ಷ್ಮಿದೇವಿ ಬೆಳವಟಗಿಮಠ, ಡಿಡಿಪಿಐ ಆರ್.ಎಸ್. ಬುರಡಿ, ಮಂಜುನಾಥ ಹೊಟ್ಟಿಗೌಡರ್, ಭಾಗ್ಯಶ್ರೀ ಹಳ್ಳಿಕೇರಿಮಠ ಅವರನ್ನು ಶ್ರೀಗಳು ಸನ್ಮಾನಿಸಿದರು. ಹೊಳಲು ವಿರಕ್ತಮಠದ ಚೆನ್ನಬಸವ ದೇವರು, ಅಕ್ಕನ ಬಳಗದ ಅಧ್ಯಕ್ಷ ಲಕ್ಷ್ಮಿದೇವಿ ಬೆಳವಟಗಿಮಠ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಎಸ್.ಬಿ. ಹಿರೇಮಠ, ಎಸ್.ಬಿ. ಕರಿಭರಮಗೌಡ್ರ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಂ.ಕೆ. ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ನಾಗಭೂಷಣ ಹಿರೇಮಠ, ದೀಪುಶ್ರೀ ಕಣವಿ ನಿರೂಪಿಸಿ, ವಂದಿಸಿದರು.