ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳು ಮತ್ತು ದಲ್ಲಾಳಿಗಳು ಕಾನೂನು ಬಾಹಿರವಾಗಿ ದಸ್ತಾವೇಜುಗಳನ್ನು ತಯಾರಿಸಿ ನೋಂದಾಯಿಸುತ್ತಿದ್ದಾರೆ. ಇದನ್ನು ತಡೆಯುವಂತೆ ಕೋರಿ ತಾಲೂಕಿನ ಪತ್ರ ಬರಹಗಾರರ ಸಂಘದ ಸದಸ್ಯರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಪತ್ರ ಅರ್ಪಿಸಿದ ಸದಸ್ಯರು, ನೋಂದಾಯಿತ ದಸ್ತಾವೇಜು ಬರಹಗಾರರ ಸಮಸ್ಯೆಗಳನ್ನು ಹೇಳಿಕೊಂಡರು.

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ-2 ಯೋಜನೆ ಜಾರಿಗೆ ಬಂದಾಗಿನಿಂದ ಕೆಲವು ಡಿಟಿಪಿ ಹಾಗೂ ಸೈಬರ್ ಸೆಂಟರ್ ಆಪರೇಟರುಗಳು ಅಧಿಕೃತ ಪತ್ರ ಬರಹಗಾರರ ಲೈಸೆನ್ಸ್ ಹೊಂದದಿದ್ದರೂ ಕಾನೂನು ಬಾಹಿರವಾಗಿ ಸಾರ್ವಜನಿಕರ ಆಸ್ತಿ ಪಾಸ್ತಿಗಳ ನೋಂದಣಿ ದಸ್ತಾವೇಜು ತಯಾರಿಸಿ ಮುಗ್ದ ರೈತರು ಮತ್ತು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.

ಅನಧಿಕೃತ ದಸ್ತಾವೇಜು ತಯಾರಿಸುವವರಿಗೆ ದಸ್ತಾವೇಜು ಬರಹದ ಬಗ್ಗೆ ಯಾವುದೇ ಅನುಭವ ಮತ್ತು ಬರವಣಿಗೆ ಕೌಶಲ್ಯ ಇಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಶ್ರೀಸಾಮಾನ್ಯರಿಂದ ಮನಸೋ ಇಚ್ಚೆ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಸ್ಪಷ್ಟವಾಗಿ ಭಾರತೀಯ ನೋಂದಣಿ ಕಾಯ್ದೆ-1904 ರ ಸೆಕ್ಷನ್ 80 ಉಲ್ಲಂಘನೆ ಎಂದರು.


ಪರವಾನಿಗೆಯಲ್ಲದ ಅನಧಿಕೃತ ದಸ್ತಾವೇಜು ಬರಹಗಾರರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪುರಸ್ಕಾರ ದೊರಕುತ್ತಿರುವುದರಿಂದ ಅಧಿಕೃತ ಪರವಾನಿಗೆ ಹೊಂದಿದ ಪತ್ರ ಬರಹಗಾರರ ವೃತ್ತಿಗೆ ಭಾರೀ ಹೊಡೆತ ಬಿದ್ದಿದೆ. ನೋಂದಾಯಿತ ಬರಹಗಾರರ ಬಗ್ಗೆ ಕಾಳಜಿ ವಹಿಸಿ ಅನಧಿಕೃತ ವ್ಯಕ್ತಿಗಳು ದಸ್ತಾವೇಜು ನೋಂದಣಿ ಮಾಡಿಸಲು ಕಚೇರಿಗೆ ಬರದಂತೆ ನಿರ್ಭಂಧಿಸಬೇಕು ಎಂದು ಆಗ್ರಹಿಸಿದರು.

ನೋಂದಣಿಗೆ ದಸ್ತಾವೇಜುಗಳನ್ನು ಹಾಜರು ಪಡಿಸಿದ ಸಮಯದಲ್ಲಿ ಭಾರತೀಯ ನೋಂದಣಿ ಕಾಯ್ದೆ ಅಡಿ ದಸ್ತಾವೇಜು ಲಿಖಿತದ ಅರ್ಹತೆಯನ್ನು ಪರಿಸೀಲಿಸಿ ನೋಂದಣಿಗೆ ಸ್ವೀಕರಿಸಲು ಉಪ ನೋಂದಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಶಾಸಕ ಎಚ್.ಟಿ.ಮಂಜು ಈ ಕುರಿತು ಉಪ ನೋಂದಣಾಧಿಕಾರಿಗಳ ಜೊತೆ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಈ ವೇಳೆ ತಾಲೂಕು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಪಿ.ಎಸ್.ಶಿವಲಿಂಗೇಗೌಡ, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಕಾರ್ಯದರ್ಶಿ ಕೆ.ಆರ್.ಹರೀಶ್ ಕುಮಾರ್, ಸಹಕಾರ್ಯದರ್ಶಿ ಟಿ.ನರಸಿಂಹಮೂರ್ತಿ, ಶಂಕರ್ ನಾಗ್, ಮುರುಗೇಶ್, ಕೆ.ಸಿ.ವೆಂಕಟರಾಮು ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು.