ಕನಕಪುರ: ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬುವ ಪ್ರೇರಣಾದಾಯಿ ಕಾರ್ಯಕ್ರಮ ಎಂದು ಆದಿತ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ತಿಳಿಸಿದರು.ನಗರದಲ್ಲಿ ತಾಲೂಕಿನ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಪುರಸ್ಕಾರಗಳು ಕೇವಲ ಪ್ರಶಸ್ತಿಯಲ್ಲ, ಅದು ವಿದ್ಯಾರ್ಥಿಗಳ ದೊಡ್ಡ ಕನಸುಗಳಿಗೆ ಬಿತ್ತಿದ ಪ್ರೇರಣೆಯ ಬೀಜ. ಅವರಲ್ಲಿ ಕಲಿಕೆಯ ಛಲ, ಸಾಮರ್ಥ್ಯ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಕೇವಲ ಅಂಕಗಳ ಕಡೆಗೆ ಗಮನಹರಿಸದೆ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಜೀವನದಲ್ಲಿ ಗುರಿ ಮುಟ್ಟುವುದು ಸುಲಭ. ಶಿಕ್ಷಕರನ್ನು ಅಭಿನಂದಿಸುತ್ತಿರುವುದು ಉತ್ತಮ ಕೆಲಸ ಎಂದರು.

ಸಮಾಜದಲ್ಲಿ ವಿದ್ಯಾವಂತರಿಂದಲೇ ಮಾನವೀಯ ಮೌಲ್ಯಗಳಿಗೆ ದಕ್ಕೆ ಬರುತ್ತಿದೆ. ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವ ಮಕ್ಕಳು ತಮ್ಮ ಪೋಷಕರನ್ನು ಕಡೆಗಣಿಸುತ್ತಿದ್ದಾರೆ. ಕೇವಲ ಹಣ ಸಂಪಾದನೆಯಿಂದ ನೆಮ್ಮದಿ ಜೀವನ ಸಾಧ್ಯವಿಲ್ಲ. ಕಠಿಣ ಪರಿಸ್ಥಿತಿಗಳನ್ನು ಎದುರಿಸುವಂತಹ ತಾಳ್ಮೆ, ಯೋಚನಾ ಶಕ್ತಿ ಹಾಗೂ ಸಾಮರ್ಥ್ಯ ಮಕ್ಕಳಿಗೆ ಕಲಿಸಬೇಕಿದೆ. ಜೀವನದಲ್ಲಿ ಗೆಲುವು ಒಂದು ಘಟನೆಯಲ್ಲ, ಅದು ನಿರಂತರ ಕಲಿಯುವ ಮತ್ತು ಬೆಳೆಯುವ ಒಂದು ಪ್ರಕ್ರಿಯೆ. ನಿಮ್ಮಲ್ಲಿರುವ ಪ್ರತಿಭೆಯನ್ನು ನಂಬಿ ಅದುವೇ ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಪ್ರತಿಭೆ ಕೇವಲ ಅಂಕಗಳಿಗೆ ಸೀಮಿತವಾಗಿರದೆ, ಅದು ಸಮಾಜಕ್ಕೆ ಉಪಯುಕ್ತವಾದಾಗ ಮಾತ್ರ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತೀಗೌಡ ಮಾತನಾಡಿ, ಈ ಬಾರಿಯ ಪ್ರೌಢ ಶಿಕ್ಷಣ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿರುವುದಕ್ಕೆ ಶಿಕ್ಷಕರು ಹಾಗು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಒಕ್ಕೂಟದ ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿ, ಇದು ನಮ್ಮ ಒಕ್ಕೂಟದ ಮೊದಲ ಪ್ರಯತ್ನ. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಹಾಗೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ, ತಾಲೂಕಿಗೆ, ಪೋಷಕರಿಗೆ ಗೌರವ ತಂದು ಕೊಟ್ಟಿರುವ ಮಕ್ಕಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಲವು ದಾನಿಗಳ ಸಹಕಾರದಿಂದ ಶೇ. ನೂರಕ್ಕೆ ನೂರು ಫಲಿತಾಂಶ ಪಡೆದಿರುವ ತಾಲೂಕಿನ ದೊಡ್ಡ ಆಲಹಳ್ಳಿಯ ಸೆಂಟ್ ಆನ್ಸ್ ಶಾಲೆ, ನಗರದ ಜೆಟ್ ಪಬ್ಲಿಕ್ ಶಾಲೆ ಹಾಗೂ ಬ್ಲಾಸಮ್ ಶಾಲೆಯ ಶಿಕ್ಷಕರ ಜೊತೆಗೆ ಅತಿ ಹೆಚ್ಚು ಅಂಕ ಪಡೆದ ಸುಮಾರು 25 ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜನಪ್ರಿಯ ಪ್ರಕಾಶ್, ಜೆಟ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಕಿರಣ್ ರಾಜ್, ಸನ್ ಶೈನ್ ಶಾಲಾ ಕಾರ್ಯದರ್ಶಿ ನಯಾಜ್, ಸೆಂಟ್ ಮೈಕಲ್ ಶಾಲೆ ಪ್ರಾಂಶುಪಾಲರಾದ ವಸಂತಮ್ಮ, ಕನಕಪುರ ಇಸಿಒ ಪ್ರಕಾಶ್, ಟೌನ್ ಪಿಆರ್‌ಸಿ ರಮೇಶ್, ಒಕ್ಕೂಟದ ಕಾರ್ಯದರ್ಶಿ ದಯಾನಂದ, ಶಿಕ್ಷಕಿ ಶಿಲ್ಪಾ, ನಿವೃತ್ತ ಶಿಕ್ಷಕ ಸಂತು ರಾಮ್, ಕೆಡಿಪಿ ಸದಸ್ಯ ಗುರುಮೂರ್ತಿ ಇತರರಿದ್ದರು.


ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಆದಿತ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ಉದ್ಘಾಟಿಸಿದರು.