ಸಾರಾಂಶ
ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಯಾಣಿಕರಿಲ್ಲದೇ ದಿನಕ್ಕೆ 4 ರಿಂದ 5 ಬಾಡಿಗೆ ಸಿಗುವುದರಿಂದ ಜೀವನದ ನಿರ್ವಹಣೆಗೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ.
ಶಿರಸಿ: ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ, ಆಟೋ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಉಪೇಂದ್ರ ಪೈ ನೇತೃತ್ವದಲ್ಲಿ ನೂರಾರು ಆಟೋ ಚಾಲಕ-ಮಾಲಕರು ತಹಸೀಲ್ದಾರರನ್ನು ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿಸಿದರು.
ಸಭೆಯಲ್ಲಿ ಉಪೇಂದ್ರ ಪೈ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಯಾಣಿಕರಿಲ್ಲದೇ ದಿನಕ್ಕೆ 4 ರಿಂದ 5 ಬಾಡಿಗೆ ಸಿಗುವುದರಿಂದ ಜೀವನದ ನಿರ್ವಹಣೆಗೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ. ಆದ್ದರಿಂದ ಹೊಸ ಆಟೋಗಳಿಗೆ ಪರವಾನಗಿ ನೀಡಬಾರದು. ಹೊಸದಾಗಿ ಆಟೋಗಳನ್ನು ಖರೀದಿಸಿ, ನಿಲ್ದಾಣಕ್ಕಾಗಿ ಸ್ಥಳಾವಕಾಶ ಇಲ್ಲದಿದ್ದರೂ ಸಂಘಕ್ಕೆ ಪದೇ ಪದೇ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಈ ವಿಷಯವನ್ನು ಸಂಘವು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿಯ ಮುಖಾಂತರ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸಂಘಕ್ಕೆ ಯಾವುದೇ ರೀತಿಯಲ್ಲಿ ನಮ್ಮ ಮನವಿಗೆ ಸ್ಪಂದಿಸದೇ ದಿಢೀರ್ ತಹಸೀಲ್ದಾರ ಮೂಲಕ ನೋಟಿಸ್ ಜಾರಿ ಮಾಡಿರುವುದು ವಿಷಾದನೀಯ. ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.ತಹಸೀಲ್ದಾರ ಪಟ್ಟರಾಜ ಗೌಡ ಮಾತನಾಡಿ, ನಗರಸಭೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಿವಿಧ ಇಲಾಖೆಯ ಸಹಕಾರದಲ್ಲಿ ಆಟೋ ನಿಲ್ದಾಣ ಪರಿಶೀಲಿಸಿ, ಹೊಸ ಆಟೋ ಸ್ಟ್ಯಾಂಡ್ ಮಾಡಲು ಸ್ಥಳಾವಕಾಶದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ತಿಳಿಸಲಾಗುವುದು ಎಂದರು.
ಸಭೆಯಲ್ಲಿ ಸಿಪಿಐ ಶಶಿಕಾಂತ ವರ್ಮಾ, ಸಾರಿಗೆ ಇಲಾಖೆಯ ನಾಗರಾಜ ಹೆಗಡೆ ಮತ್ತಿತರರು ಇದ್ದರು.