ಸಾರಾಂಶ
ಕುಕನೂರು: ವಿಶ್ವಕರ್ಮ ಸಮಾಜದವರು ಕಾಯಕನಿಷ್ಠೆಯಿಂದ ಮಾದರಿ ಆಗಿದ್ದಾರೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಕಾಳಿಕಾದೇವಿ ಬಡಗಿತನ ಕಸುಬುದಾರರ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಮತ್ತು ಮಂಗಳೂರು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಜರುಗಿದ ತಾಲೂಕು ಮಟ್ಟದ ಶ್ರೀ ವಿರಾಟ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಹೊಸತನ, ಪೂಜಾ ಸಂಸ್ಕಾರ, ಧಾರ್ಮಿಕ ಕಾರ್ಯಗಳಿಗೆ ವಿಶ್ವಕರ್ಮ ಸಮಾಜದವರ ಕೊಡುಗೆ ಹೆಚ್ಚಿದೆ. ಅವರ ಕಾಯಕನಿಷ್ಠೆಯಿಂದ ಕಲೆಯಲ್ಲಿ ಪ್ರಾವಿಣ್ಯ ಸಾಧಿಸಿದ್ದಾರೆ ಎಂದರು. ತಾಪಂ ಮಾಜಿ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ, ಇಡೀ ವಿಶ್ವವನ್ನೇ ಸೃಷ್ಟಿ ಮಾಡಿದ್ದು ಈಶ್ವರ. ಆದರೆ ದೇವಲೋಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡಿದ್ದು ವಿಶ್ವಕರ್ಮ. ಹಾಗಾಗಿ ಪುರಾಣ ಕಾಲದಿಂದಲೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮದ ಕೊಡುಗೆ ಅಪಾರವಾಗಿದೆ. ರಥಗಳು ವಿಶ್ವಕರ್ಮರ ಕೊಡುಗೆಗಳಾಗಿವೆ ಎಂದರು.ಮಂಗಳೂರು ಗ್ರಾಮದಲ್ಲಿ ವಿಶ್ವಕರ್ಮ ಸಮಾಜದವರ ಕೈಯಲ್ಲಿ ಅರಳುವ ಮನೆಯ ಕಟ್ಟಿಗೆಯ ಮಡಿಗೆಗಳು ಪ್ರಖ್ಯಾತಿ ಪಡೆದಿದ್ದು, ನಾಡಹಬ್ಬ ಮೈಸೂರು ದಸರಾದ ಮೆರವಣಿಗೆಯಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ವೇದಿಕೆಯಲ್ಲಿದ್ದ ಉಪ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ್ರ ಕೋನನಗೌಡ್ರ ಮಾತನಾಡಿ, ವಿಶ್ವಕರ್ಮ ಸಮಾಜದವರು ಒಂದು ಕಲ್ಲನ್ನು ಮೃದು ಮಾಡಿ ಅದಕ್ಕೆ ಒಂದು ರೂಪ ನೀಡುವರು. ಅವರ ಕೊಡುಗೆಯಿಂದ ಭಾರತ ವಾಸ್ತು ಶಿಲ್ಪದಲ್ಲಿ ಹೆಸರು ಪಡೆದಿದೆ ಎಂದರು.ಶ್ರೀ ನಾಗಲಿಂಗ ಸ್ವಾಮೀಜಿ ಮಾತನಾಡಿ, ಈ ಜಗತ್ತು ಸುಂದರವಾಗಿ ಕಾಣಲು ನಾವು ಯಾವುದೇ ಕಟ್ಟಡದ ವಾಸ್ತು ಶಿಲ್ಪವನ್ನು ನೋಡಿದಾಗ ಅದು ನಮ್ಮ ಕಣ್ಮನ ಸೆಳೆಯುತ್ತದೆ. ಅದಕ್ಕೆ ವಿಶ್ವಕರ್ಮರ ಕೊಡುಗೆ ಸಾಧನೆಯನ್ನು ನಾವೆಲ್ಲರೂ ಮನಗಾಣಬೇಕು ಎಂದರು.
ಪ್ರಕಾಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಜಯಕುಮಾರ ಜಡಿಯವರ ವಿಶೇಷ ಉಪನ್ಯಾಸ ನೀಡಿದರು. ಗ್ರಾಮದಲ್ಲಿ ವಿರಾಟ ವಿಶ್ವಕರ್ಮರ ಮೆರವಣಿಗೆ ಜರುಗಿತು.ಶ್ರೀ ನಾಗಮೂರ್ತೆಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಡ ಕಾರ್ಯಾಲಯದ ಉಪತಹಸೀಲ್ದಾರ್ ಬಸವರಾಜ, ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಗ್ರಾಪಂ ಸದಸ್ಯೆ ಮಾನಮ್ಮ ಕಮ್ಮಾರ, ಡಾ. ಸಿ.ಎಂ. ಹಿರೇಮಠ, ಈರೇಶಪ್ಪ, ರವಿ ಡಿ. ಮಳಗಿ, ಸಿಆರ್‌ಪಿ, ದೇವೇಂದ್ರಪ್ಪ ಡಿ. ಬಡಿಗೇರ, ಅಶೋಕ ಪತ್ತಾರ, ಅಮರೇಶಪ್ಪ ಪತ್ತಾರ, ಗಂಗಾಧರ ಡಿ. ಬಡಿಗೇರ ಇತರರಿದ್ದರು.