ಸಾರಾಂಶ
ಶಿಗ್ಗಾಂವಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಭಾರತ ಮಾತೆಗೆ ಜೈ ಎಂದರೆ ಜೈಲಿಗೆ ಹಾಕುತ್ತಾರೆ. ಪಾಕಿಸ್ತಾನವನ್ನು ನಾಯಿ ಕುನ್ನಿಯಂತೆ ಕೂಡಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಶಿಗ್ಗಾಂವಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆ ವೇಳೆ ನಡೆದ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ನಿಮ್ಮ ಬೆಳೆಗಳಿಗೆ ಬೆಲೆ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದ್ದೇವೆ. ರೈತರ ಬೆಳೆಗಳಿಗೆ ಎಂಎಸ್‌ಪಿ ನೀಡುತ್ತಿದ್ದೇವೆ. ರಸ್ತೆ ಮಾಡುವ ಕೆಲಸ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವರದಾ ನದಿ ನೀರನ್ನು ನಿಮ್ಮ ಹೊಲಗಳಿಗೆ ಹರಿಸುವ ಭಗೀರಥನ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ಬಸವರಾಜ ಬೊಮ್ಮಾಯಿ ಎಂದರು.ಕ್ಷೇತ್ರದಲ್ಲಿ ೧೮ ಸಾವಿರ ಮನೆಗಳು, ಕಾಂಕ್ರಿಟ್ ರಸ್ತೆ, ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮುಂದುವರೆಸಬೇಕೆಂದರೆ ಭರತ್ ಬೊಮ್ಮಾಯಿಗೆ ಬೆಂಬಲಿಸಬೇಕು. ಕಾಂಗ್ರೆಸ್ಸಿನವರು ಗ್ಯಾರೆಂಟಿ ಕೊಡುತ್ತೇನೆ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ನಾವು ಐದು ಕೆಜಿ ಅಕ್ಕಿ ಕೊಡುತ್ತೇವೆ ಎಂದರೆ ಇವರು ದುಡ್ಡು ಇಲ್ಲ ಎಂದರು.ಗೃಹ ಲಕ್ಷ್ಮಿ ಹಣ ಬರುತ್ತಿಲ್ಲ. ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮೀ ಹಣ ಬರುತ್ತಿಲ್ಲ. ಆದರೆ, ಇವರು ಮುಡಾದಲ್ಲಿ ೧೪ ಸೈಟು ಹೊಡೆದಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಹಣ ಲೂಟಿ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸನ್ನು ಸೋಲಿಸಬೇಕು ಎಂದು ಹೇಳಿದರುಅತಿ ಹೆಚ್ಚು ಮತ: ಕಾಂಗ್ರೆಸ್ಸಿನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಭರತ್ ಬೊಮ್ಮಾಯಿಯವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.ಭರತ್ ಬೊಮ್ಮಾಯಿವರಿಗೆ ಇಷ್ಟು ದೊಡ್ಡ ಶಕ್ತಿ ನೀಡಿದ್ದೀರಿ ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಚುನಾವಣೆಗೆ ನಾಲ್ಕು ಬಾರಿ ಶಿಗ್ಗಾಂವಿಗೆ ಬಂದಿದ್ದಾರೆ. ಅವರು ಶಿಗ್ಗಾಂವಿಗೆ ಕಾಲಿಟ್ಟಾಗಲೆಲ್ಲಾ ಬಿಜೆಪಿ ಇಲ್ಲಿ ಗೆದ್ದಿದೆ. ಯಡಿಯೂರಪ್ಪ ಅವರ ಆಶಿರ್ವಾದ ಎಷ್ಟಿದೆ ಎಂದರೆ ನನಗಿಂತ ಹೆಚ್ಚಿನ ಅಂತರದಿಂದ ಭರತ್‌ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬಿಜೆಪಿ ಕಟ್ಟಿದ್ದಾರೆ. ಅವರ ಶ್ರಮದಿಂದ ಶಿಗ್ಗಾಂವಿಯಲ್ಲಿ ಐಟಿಐ, ಮೆಡಿಕಲ್ ಕಾಲೇಜು, ಆಸ್ಪತ್ರೆ ಬಂದಿದೆ. ಕ್ಷೇತ್ರದಲ್ಲಿ ಗಾರ್ಮೆಂಟ್ ಕಾರ್ಖಾನೆಯಿಂದ ಸುಮಾರು ಐದು ಸಾವಿರ ಹೆಣ್ಣು ಮಕ್ಕಳು ಉದ್ಯೋಗ ಪಡೆದಿದ್ದಾರೆ. ಭರತ್ ಬೊಮ್ಮಾಯಿ ನಮ್ಮ ಕಾಲದ ಅಭಿವೃದ್ಧಿ ಮುಂದುವರೆಸಬೇಕು. ರೈತರು, ಹಿಂದುಳಿದವರು, ಮಹಿಳೆಯರು, ಯುವಕರ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಭರತ್‌ಗೆ ಆದೇಶ ಮಾಡುತ್ತೇನೆ. ನಾನು ನಿಮ್ಮ ಜೊತೆಗೆ ಇರುತ್ತೇನೆ. ಚುನಾವಣೆಯಲ್ಲಿ ಯಾರೂ ಮೈಮರೆಯಬಾರದು, ಹತ್ತು ದಿನ ಎಲ್ಲರೂ ಬೂತ್ ಮಟ್ಟದಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಅಭಿವೃದ್ಧಿ ಕನಸು: ನಮ್ಮ ಪಕ್ಷದ ನಾಯಕರ ಆಶಯದಂತೆ ನಮ್ಮ ತಂದೆಯ ಅಭಿವೃದ್ಧಿ ಕನಸು ನನಸು ಮಾಡುತ್ತೇನೆ ಎಂದು ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು.ಇಷ್ಟು ದೊಡ್ಡ ಸಂಖ್ಯೆಯಲ್ಕಿ ಬಂದಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ನಮ್ಮ ತಂದೆಯವರು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಕೆರೆ ತುಂಬಿಸಿದ್ದಾರೆ, ಆಸ್ಪತ್ರೆ ತಂದಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ ದೀನ ದಲಿತರು, ಎಸ್ಸಿ, ಎಸ್ಟಿ, ರೈತರು, ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡುತ್ತೇನೆ. ನಿಮ್ಮ ತಮ್ಮವನಾಗಿ ನಿಮ್ಮೆಲ್ಲರ ರಕ್ಷಣೆ ಮಾಡುತ್ತೇನೆ. ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಆಗಮಿರುವುದಕ್ಕೆ ನಿಮಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.ಚುನಾವಣೆಯ ದಿನ ನಿಮ್ಮೆಲ್ಲ ಬಂಧುಗಳ ಜೊತೆ ಬಂದು ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು. ಬಸವರಾಜ ಬೊಮ್ಮಾಯಿಯವರಿಗಿಂತ ಹೆಚ್ಚಿನ ಮತದ ಅಂತರದಲ್ಲಿ ಭರತ್‌ನನ್ನು ಗೆಲ್ಲಿಸಬೇಕು. ಇಂತಹ ಉರಿ ಬಿಸಿಲಿನಲ್ಲಿ ನೀವೆಲ್ಲ ಬಂದು ಬೆಂಬಲ ಸೂಚಿಸಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.