ಕೃಷಿ ಸೌಲಭ್ಯಗಳಿಗೆ ಅರ್ಜಿ, ವಿವರ ಸಲ್ಲಿಸಿದರೆ ಸೌಲಭ್ಯ

| Published : Dec 13 2023, 01:00 AM IST

ಕೃಷಿ ಸೌಲಭ್ಯಗಳಿಗೆ ಅರ್ಜಿ, ವಿವರ ಸಲ್ಲಿಸಿದರೆ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಅಹವಾಲು ಸಲ್ಲಿಸಿ, ಪುರಸಭೆಯಲ್ಲಿ ಇ-ಸ್ವತ್ತಿನ ಸಮಸ್ಯೆ ವಿಪರೀತವಾಗಿದೆ. ಜನತೆ ಅರ್ಜಿ ಸಲ್ಲಿಸಿ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿದೆ. ಮರಣ ದಾಖಲೆ ನೀಡುವುದು ತುಂಬಾ ವಿಳಂಬವಾಗುತ್ತಿದ್ದು, ಈ ಬಗ್ಗೆ ವಿಚಾರಿಸಲು ಪುರಸಭಾ ಸದಸ್ಯರು ಫೋನ್ ಮೂಲಕ ಕರೆ ಮಾಡಿದರೆ, ಮುಖ್ಯಾಧಿಕಾರಿ ಸಹಿತ ಸಿಬ್ಬಂದಿ ಸ್ವೀಕರಿಸುವುದಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಪ್ರಸಕ್ತ ಸಾಲಿನ ಮುಂಗಾರು ವೈಫಲ್ಯದ ಕಾರಣಕ್ಕೆ ಹಾನಿ ಆಗಿರುವ ಕೃಷಿ ಬೆಳೆಗೆ ಸಂಬಂಧಿಸಿದಂತೆ ಬಾಧಿತ ಆಗಿರುವ ರೈತರು ಸರ್ಕಾರದಿಂದ ಪರಿಹಾರಧನ ಪಡೆಯಲು ಆನ್‌ಲೈನ್‌ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಫ್ರೂಟ್ ತಂತ್ರಾಂಶ ಮೂಲಕ ಸಲ್ಲಿಸಿ, ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ತಾಲೂಕಿನಲ್ಲಿ ಇದುವರೆಗೆ ಶೇ.83ರಷ್ಟು ರೈತರು ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಸಕಾಲದಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ, ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಈಗಾಗಲೇ ಜಿಲ್ಲಾ ಕೇಂದ್ರ ಶಿವಮೊಗ್ಗ ನಂತರ ಸೊರಬದಲ್ಲಿ ಜನತಾ ದರ್ಶನ ಆಯೋಜಿಸಿ, ಸಹಸ್ರಾರು ಸಂಖ್ಯೆಯ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯವಾಗಿದ್ದು, ಇದೀಗ ಪಟ್ಟಣದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರಿಂದ ಇಲ್ಲಿ ಸ್ವೀಕರಿಸಲಾದ ಅಂದಾಜು 275 ಅರ್ಜಿಗಳಲ್ಲಿ ಹಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗಿದೆ. ಉಳಿದ ಅರ್ಜಿಗಳನ್ನು ನಿಯಮಿತ ಕಾಲಾವಧಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸಾರ್ವಜನಿಕರು ಈ ಅರ್ಜಿಗಳ ಪ್ರತಿ ಹಂತದ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರೂ ತಿಳಿಯಬಹುದಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಅಹವಾಲು ಸಲ್ಲಿಸಿ, ಪುರಸಭೆಯಲ್ಲಿ ಇ-ಸ್ವತ್ತಿನ ಸಮಸ್ಯೆ ವಿಪರೀತವಾಗಿದೆ. ಜನತೆ ಅರ್ಜಿ ಸಲ್ಲಿಸಿ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿದೆ. ಮರಣ ದಾಖಲೆ ನೀಡುವುದು ತುಂಬಾ ವಿಳಂಬವಾಗುತ್ತಿದ್ದು, ಈ ಬಗ್ಗೆ ವಿಚಾರಿಸಲು ಪುರಸಭಾ ಸದಸ್ಯರು ಫೋನ್ ಮೂಲಕ ಕರೆ ಮಾಡಿದರೆ, ಮುಖ್ಯಾಧಿಕಾರಿ ಸಹಿತ ಸಿಬ್ಬಂದಿ ಸ್ವೀಕರಿಸುವುದಿಲ್ಲ ಎಂದು ದೂರಿದರು.

ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮನವಿ ಸಲ್ಲಿಸಿ, ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಕೂಡಲೇ ತೆರೆಯುವಂತೆ ಮನವಿ ಮಾಡಿದರು.

ಚಿಕ್ಕಾಪುರ ಗ್ರಾಮಸ್ಥರು ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಲು ಮನವಿ ಸಲ್ಲಿಸಿದರೆ, ಕಣವಿ ಮನೆ ಗ್ರಾಮದ ಜಿಪಂ ಮಾಜಿ ಉಪಾಧ್ಯಕ್ಷ ಅರುಣ್, ಗ್ರಾಮವು ಅರಣ್ಯ ಗ್ರಾಮವಾಗಿಯೇ ಉಳಿದಿದೆ, ಈ ಗ್ರಾಮದಲ್ಲಿ 500ಕ್ಕೂ ಹೆಚ್ಚಿನ ಮನೆಗಳಿದ್ದು, ಇಲ್ಲಿ ಯಾರೊಬ್ಬರಿಗೂ ವಾಸಸ್ಥಳದ ಹಕ್ಕುಪತ್ರ ಸಿಕ್ಕಿಲ್ಲ. ಈ ವಿಚಾರವಾಗಿ ಚುನಾವಣೆ ಬಹಿಷ್ಕಾರ ಕೂಡ ಮಾಡಲಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಿ, ಹಕ್ಕುಪತ್ರ ಕೊಡಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ ಮನವಿ ಸಲ್ಲಿಸಿ, ತಾಲೂಕಿನಲ್ಲಿ ರೈಲ್ವೆ ಯೋಜನೆ, ರಿಂಗ್ ರೋಡ್ ಮತ್ತು ರಾಷ್ಟ್ರೀಯ ಹೆದ್ದಾರಿಗಾಗಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದೆ. ಈ ರಸ್ತೆಗೆ ಅಲ್ಪಸ್ವಲ್ಪ ಭೂಮಿ ಹೊಂದಿರುವ ರೈತರ ಭೂಸ್ವಾಧೀನಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಯೋಜನೆಯನ್ನು ಕೂಡಲೇ ಕೈ ಬಿಡಬೇಕು. ಈ ಬಗ್ಗೆ ಹಲವು ಬಾರಿ ಪ್ರತಿಭಟಿಸಿ ತಮಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು, ಸಾರ್ವಜನಿಕರಿಂದ ಮೊದಲ ಹಂತದಲ್ಲಿ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಬಳಿಕ ವೈಯಕ್ತಿಕ ಹಾಗೂ ಗುಂಪುಗಳಲ್ಲಿ ಅರ್ಜಿಗಳನ್ನು ಪಡೆದು, ಕೆಲವು ಅರ್ಜಿಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ಮತ್ತಿತರ ಸಮಸ್ಯೆಗಳಿರುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

275ಕ್ಕೂ ಅಧಿಕ ಅರ್ಜಿ ಸಲ್ಲಿಕೆ:

ಸಲ್ಲಿಕೆಯಾದ ಅರ್ಜಿಗಳಲ್ಲಿ ಪ್ರಮುಖವಾಗಿ ಬಗರ್‌ಹುಕುಂ ಸಾಗುವಳಿ ಭೂಮಿ ಮಂಜೂರಾತಿ, ಅಂಜನಾಪುರ ಜಲಾಶಯದ ಹೂಳೆತ್ತುವುದು, ರೈಲ್ವೆ ಮಾರ್ಗ ವಿಸ್ತರಣೆಗೆ ಭೂಸ್ವಾಧೀನಪಡಿಸಿಕೊಂಡ ರೈತರಿಗೆ ಸಕಾಲದಲ್ಲಿ ಪರಿಹಾರಧನ ಬಿಡುಗಡೆ, ವರ್ತುಲ ರಸ್ತೆ, ಬೈಪಾಸ್ ರಸ್ತೆ, ಕೆರೆ ಒತ್ತುವರಿ ತೆರವುಗೊಳಿಸಿ ಗ್ರಾಮೀಣ ಪ್ರದೇಶದ ಕೆರೆಕಟ್ಟೆ ಕಾಲುವೆಗಳಲ್ಲಿನ ಹೂಳನ್ನು ತೆಗೆಸಿ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದು, ಇ-ಸ್ವತ್ತು ಮಾಡಿಸುವುದು, ಹೊಸ ಅಂಗನವಾಡಿ ಕೇಂದ್ರಗಳ ಮಂಜೂರಾತಿ, ರೇಷನ್‌ ಕಾರ್ಡ್, ಇಂದಿರಾ ಕ್ಯಾಂಟೀನ್, ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಕೊಡಿಸಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸಂಪರ್ಕ ಸೌಲಭ್ಯ, ರೈತರ ಜಮೀನುಗಳನ್ನು ಖಾತೆ ಪೋಡಿ ಮಾಡಿಕೊಡುವುದು, ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನ ಭೂಮಿ ಮಂಜೂರಾತಿ ಮುಂತಾದ ಸಾಮಾನ್ಯದಿಂದ ಗಂಭೀರ ಸ್ವರೂಪದ 275ಕ್ಕೂ ಹೆಚ್ಚಿನ ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು.

ಅಲ್ಲದೇ ಸಾರ್ವಜನಿಕರ ನೆಮ್ಮದಿಯ ಕೌಟುಂಬಿಕ ಬದುಕನ್ನು ಹಾಳು ಮಾಡುವ ಮಟ್ಕಾ, ಜೂಜುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಸಂಚಾರಿ ಪೊಲೀಸ್ ಠಾಣೆ,ಚೋರಡಿ-ಶಿಕಾರಿಪುರ ರಸ್ತೆ ದುರಸ್ತಿ,ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯ ಮಂಜೂರು ಮಾಡುವುದು ಸೇರಿದಂತೆ ಇನ್ನಷ್ಟು ವಿಷಯಗಳ ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು.

ಈ ಸಂದರ್ಭದಲ್ಲಿ ಸಿಇಒ. ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ದಿ, ತಹಸೀಲ್ದಾರ್‌ ಮಲ್ಲಪ್ಪ ಬೀರಪ್ಪ ಪೂಜಾರ್, ಪುರಸಭಾ ಮುಖ್ಯಾಧಿಕಾರಿ ಭರತ್‌ ಸಹಿತ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - - -12ಕೆಎಸ್‌.ಕೆಪಿ2:

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿ ಜನತಾದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಉದ್ಘಾಟಿಸಿದರು.