ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಸಂಖ್ಯೆ ಸಿಬ್ಬಂದಿ ನೇಮಿಸಿ

| Published : Oct 27 2024, 02:19 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಪೂರೈಕೆ, ಸಿಬ್ಬಂದಿಗಳನ್ನು ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಪೂರೈಕೆ, ಸಿಬ್ಬಂದಿಗಳನ್ನು ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರವೂ ಕೂಡ ಒಂದು. ಶಿವಮೊಗ್ಗ ಜಿಲ್ಲೆಯು ಅತೀ ಹೆಚ್ಚಿನ ಮತೀಯ ಸೂಕ್ಷ್ಮತೆಯಿಂದ ಕೂಡಿದೆ. ಶಿವಮೊಗ್ಗ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ಆರೋಪಿಗಳನ್ನು ಅರೆಸ್ಟ್ ಮಾಡಿದಾಗ ಅವರನ್ನು ಜೈಲಿಗೆ ಬಿಟ್ಟು ಬರಬೇಕೆಂದರೆ ಬೈಕ್‌ಗಳಲ್ಲಿ ಬಿಟ್ಟು ಬರುವುದು ಆಗುತ್ತಿದೆ. ಏನಾದರೂ ಪ್ರಕರಣಗಳು ನಡೆದಾಗ ಸ್ಪಾಟ್‌ಗೆ ಹೋಗಲು ಮತ್ತು ಸಿಬ್ಬಂದಿಗಳನ್ನ ಸ್ಪಾಟ್‌ಗೆ ಕರೆದುಕೊಂಡು ಹೋಗಲು ವಾಹನಗಳ ಅವಶ್ಯಕತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಪೂರೈಸಬೇಕು ಎಂದು ಮನವಿ ಮಾಡಿದರು.ಶಿವಮೊಗ್ಗ ಹೆಚ್ಚು ವಾಹನ ದಟ್ಟಣೆ ಇರುವಂತಹ ನಗರ. ಟ್ರಾಫಿಕ್ ಸ್ಟೇಷನ್‌ಗಳಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚು ಇದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಚ್ಚು ಇನ್ಸ್ಟ್ರುಮೆಂಟ್ಸ್, ಸೈನ್ ಬೋರ್ಡ್ ಇತ್ಯಾದಿಗಳನ್ನು ನೀಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೈಂ ಸಂಖ್ಯೆ ಹೆಚ್ಚಿದೆ. ಠಾಣೆಗಳಲ್ಲಿ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಗಳ ಅಗತ್ಯ ಮತ್ತು ಅವಶ್ಯಕತೆ ಇರುವುದರಿಂದ ತಾವುಗಳು ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಜಿಲ್ಲೆಗೊಂದು ಫಾರೆನ್ಸಿಕ್ ಟೀಮ್ ಇದೆ. ಆದರೆ, ಅವರ ಕೆಲಸ ನಿರ್ವಹಣೆಗೆ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇರುವುದರಿಂದ ಕಟ್ಟಡ ನಿರ್ಮಾಣ ಮಾಡಬೇಕು. ಶಿವಮೊಗ್ಗ-ಭದ್ರಾವತಿ ವ್ಯಾಪ್ತಿ ಪೊಲೀಸ್ ಕಮೀಷನರೇಟ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ್‌ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಲಾಯಿತು.ಈ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಪ್ರಮುಖರಾದ ಬಿ.ಎ ಕಾಟ್ಕೆ, ಹರಿಗೆ ರವಿ ಸೇರಿದಂತೆ ಹಲವರಿದ್ದರು.

ಪೋಲೀಸ್ ಠಾಣೆ, ವ್ಯಾಯಾಮ ಶಾಲೆ ಕ್ರೀಡಾಂಗಣ ನಿರ್ಮಿಸಲು ಮನವಿ

ಶಿವಮೊಗ್ಗ ನಗರದಲ್ಲಿ ಕಮಿಷನರ್ ಕಚೇರಿ ನಿರ್ಮಾಣ, ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ, ಪೊಲೀಸ್ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ನಿರ್ಮಿಸುವಂತೆ ಒತ್ತಾಯಿಸಿ ಶನಿವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಶಿವಮೊಗ್ಗದಲ್ಲಿ ಸುಮಾರು ನಾಲ್ಕು ಲಕ್ಷ ಜನಸಂಖ್ಯೆಇದೆ. ಆದ್ದರಿಂದ ಗೋಪಾಳ ಭಾಗದಲ್ಲಿ ಮತ್ತು ಏರ್‌ಪೋರ್ಟ್‌ನಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಬೇಕು. ಇಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು ಇದರ ದೃಷ್ಟಿಯಿಂದ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನ್ನು ಪ್ರತ್ಯೇಕವಾಗಿ ಗ್ರಾಮಾಂತರ ಭಾಗಕ್ಕೆ ಹಾಗೂ ನಗರ ಭಾಗದಲ್ಲಿ ಮತ್ತೊಂದು ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ, ಪೊಲೀಸರ ಆರೋಗ್ಯ ದೃಷ್ಟಿಯಿಂದ ಪೊಲೀಸ್ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ನಿರ್ಮಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೆರವೇರಿಸಿದರು.