ಕನ್ನಡಪ್ರಭ ವಾರ್ತೆ ಮಂಡ್ಯ
ಹದಿನಾಲ್ಕರಿಂದ ಹದಿನೈದು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ದೃಷ್ಟಿಯಿಂದ ಎಚ್‌ಪಿವಿ ಲಸಿಕೆ ರಕ್ಷಣಾತ್ಮಕ ಲಸಿಕೆಯಾಗಿದ್ದು, ಎಲ್ಲಾ ಹೆಣ್ಣು ಮಕ್ಕಳು ಕಡ್ಡಾಯವಾಗಿ ಲಸಿಕೆ ಪಡೆದು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಗತಿ, ದಡಾರ ರುಬೆಲ್ಲಾ ನಿರ್ಮೂಲನೆ ಹಾಗೂ ಎಚ್‌ಪಿವಿ ಲಸಿಕಾ ಅಭಿಯಾನದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂದಿನ ಒಂದು ತಿಂಗಳವರೆಗೆ ೧೪ ರಿಂದ ೧೫ ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳನ್ನು ಗುರುತಿಸಿ ಲಸಿಕೆ ಪಡೆಯುವಂತೆ ಅರಿವು, ಮಕ್ಕಳಲ್ಲಿ ತಪ್ಪು ಗ್ರಹಿಕೆ ಮತ್ತು ಗೊಂದಲವನ್ನು ಹೋಗಲಾಡಿಸುವ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಲಸಿಕೆ ಪ್ರಯೋಜನದ ತಿಳಿವಳಿಕೆ ಜಾಗೃತಿಯನ್ನು ಮೂಡಿಸಬೇಕು ಎಂದರು.ಪ್ರಾಥಮಿಕ ಅರೋಗ್ಯ ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಎಚ್‌ಪಿವಿ ಸುರಕ್ಷಿತ ಲಸಿಕೆಯಾಗಿದ್ದು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಮಹತ್ವದ ಮಾಹಿತಿಯನ್ನು ತಿಳಿಸಬೇಕು ಎಂದರು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಹೆಚ್‌ಪಿವಿ ಲಸಿಕೆ ನೀಡುವುದರಿಂದ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಡ್ಡಾಯವಾಗಿ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಕ್ರಮ ವಹಿಸಬೇಕು. ಈ ಅಭಿಯಾನಕ್ಕೆ ಶಿಕ್ಷಣ ಇಲಾಖೆ ಸಹಕರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕೆ.ಮೋಹನ್, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಎಂ.ಎನ್.ಆಶಾಲತಾ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಜಿ.ವೇಣುಗೋಪಾಲ್ ಉಪಸ್ಥಿತರಿದ್ದರು.