ಡಿಕೆ ಸಹೋದರರದ್ದು ಮೊಸಳೆ ಕಣ್ಣೀರಾ?

| Published : Nov 05 2024, 01:34 AM IST

ಸಾರಾಂಶ

ಚನ್ನಪಟ್ಟಣ: ಹೂವಿನ ವರ್ತಕರು ಸೇರಿದಂತೆ ಪ್ರಮುಖ ಮುಖಂಡರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಹಾಗೂ ಬಿಜೆಪಿ ನಾಯಕ ಎಂ.ರುದ್ರೇಶ್ ನಾಯಕತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಾದರು.

ಚನ್ನಪಟ್ಟಣ: ಹೂವಿನ ವರ್ತಕರು ಸೇರಿದಂತೆ ಪ್ರಮುಖ ಮುಖಂಡರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಹಾಗೂ ಬಿಜೆಪಿ ನಾಯಕ ಎಂ.ರುದ್ರೇಶ್ ನಾಯಕತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಾದರು.

ತಾಲೂಕಿನ ಎಲೆಕೇರಿ ಗ್ರಾಮದಲ್ಲಿ ಅನ್ಯ ಪಕ್ಷ ತೊರೆದು ಎನ್ ಡಿಎ ಮೈತ್ರಿಕೂಟ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವನಾತ್ಮಕ ಜೀವಿ, ಹಾಗಾಗಿ ಕಣ್ಣೀರು ಹಾಕಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಕಣ್ಣೀರು ಹಾಕಿದ ನಿದರ್ಶನವಿದೆ. ಹಾಗಾದರೆ ಅವರದ್ದು ಮೊಸಳೆ ಕಣ್ಣೀರ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಎರಡು ಬಾರಿ ಜನರ ಆಶೀರ್ವಾದದಿಂದ ಶಾಸಕರಾಗಿದ್ದವರು. ಇದು ಡಿ.ಕೆ.ಶಿವಕುಮಾರ್ ಜಾಗೀರ್‌ ದಾರ್ ಕ್ಷೇತ್ರವಲ್ಲ. ಚನ್ನಪಟ್ಟಣದಲ್ಲಿ ಜೆಡಿಎಸ್‌, ಬಿಜೆಪಿ ಕಾರ್ಯಕರ್ತರ ಪಡೆ ಬಲಿಷ್ಠವಾಗಿದೆ. ಅನಿವಾರ್ಯ ಕಾರಣಕ್ಕೆ ನಿಖಿಲ್ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್ ಸಂಚು ಎದುರಿಸಲು ನಿಖಿಲ್ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದರು.

ಯೋಗೇಶ್ವರ್ ಮನಸ್ಥಿತಿ ಅರಿತಿರುವ ಅಲ್ಪಸಂಖ್ಯಾತರು ಅವರ ಪರ ನಿಲ್ಲಲ್ಲ. ಚನ್ನಪಟ್ಟಣ ಅಭಿವೃದ್ಧಿ ನೋಡಿದರೆ ಖುಷಿಯಾಗುತ್ತದೆ. ಕುಮಾರಸ್ವಾಮಿ ಸಾಕಷ್ಟು ಕೆಲಸ ಮಾಡಿದ್ದಾರೆ. ಎಲ್ಲಾ ಸಮುದಾಯಗಳು ಎನ್ ಡಿಎ ಅಭ್ಯರ್ಥಿ ಪರವಾಗಿದೆ. ಯೋಗೇಶ್ವರ್ ಬಣದಲ್ಲಿದ್ದ ಹಲವರು, ಕಾಂಗ್ರೆಸ್ ಅಸಮಾಧಾನಿತರು ನಮ್ಮ ಪರ ಬರುತ್ತಿದ್ದಾರೆ. ಕಷ್ಟಕಾಲದಲ್ಲಿ ಎದೆಕೊಟ್ಟು ಹೋರಾಡುವ ಗುಣ ದೇವೇಗೌಡರ ಕುಟುಂಬದವರಿಗೆ ಇದೆ. ಕಾಂಗ್ರೆಸ್‌ನಲ್ಲಿ ವಂಶ ರಾಜಕಾರಣ ಇಲ್ಲವೇ. ಇಂದಿರಾಗಾಂಧಿ ಕುಟುಂಬಕ್ಕೆ ಜೀ ಹುಜೂರ್ ಎನ್ನುತ್ತಿದ್ದಾರೆ. ಸ್ವತಃ ಡಿ.ಕೆ. ಶಿವಕುಮಾರ್ ಕುಟುಂಬದವರು ರಾಜಕೀಯದಲ್ಲಿದ್ದಾರೆ‌. ಆದರೆ ಎಲ್ಲರಿಗೂ ದೇವೇಗೌಡರ ಕುಟುಂಬ ಮಾತ್ರ ಕಾಣುತ್ತದಾ ಎಂದು ಸುರೇಶ್ ಬಾಬು ತಿರುಗೇಟು ನೀಡಿದರು.

ಈ ವೇಳೆ ಮುಖಂಡರಾದ ಎಲೆಕೇರಿ ರವೀಶ್ , ಹುಲುವಾಡಿ ದೇವರಾಜು, ಶೇಷಪ್ಪ, ಎಸ್ .ಆರ್ .ನಾಗರಾಜು ಹಾಜರಿದ್ದರು.

4ಕೆಆರ್ ಎಂಎನ್ 6.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದ ಎಲೆಕೇರಿಯಲ್ಲಿ ಅನ್ಯ ಪಕ್ಷಗಳ ಮುಖಂಡರು ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಾದರು.

ಇಂದು ಮಾಜಿ ಪ್ರಧಾನಿ

ದೇವೇಗೌಡರಿಂದ ಪ್ರಚಾರ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತಯಾಚನೆ ಮಾಡಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ವಿರುಪಾಕ್ಷಿಪುರ, ಕೋಡಂಬಳ್ಳಿ, ಜೆ. ಬ್ಯಾಡರಹಳ್ಳಿ, ಎಲೆ ತೋಟದಹಳ್ಳಿ (ವೈ.ಟಿ.ಹಳ್ಳಿ) ಯಲ್ಲಿ ದೇವೇಗೌಡರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.

4ಕೆಆರ್ ಎಂಎನ್ 7.ಜೆಪಿಜಿ

ಮಾಜಿ ಪ್ರಧಾನಿ ದೇವೇಗೌಡ