ದಲಿತರಿಗೆ ಹಲ್ಲೆಗೈದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ

| Published : Nov 05 2024, 01:33 AM IST

ಸಾರಾಂಶ

ನರಸಿಂಹರಾಜಪುರ : ತಾಲೂಕಿನ ಬೈರಾಪುರ ಗ್ರಾಮದ ಚಿತ್ರಪ್ಪ ಯರಬಾಳ್ ಎಂಬವರ ದಲಿತ ಕುಟುಂಬದ ಮೇಲೆ ಭದ್ರಾವತಿಯ ಅರಣ್ಯ ವಿಭಾಗದ ಎಸಿಎಫ್‌, ಡಿಸಿಎಫ್ ಹಾಗೂ ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದಸಂಸ ಜಿಲ್ಲಾ ಸಂಚಾಲಕ ಎಚ್‌.ಎಂ. ಶಿವಣ್ಣ ಮಾತನಾಡಿ, ಯಾವ ಸರ್ಕಾರ ಬಂದರೂ ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ. ಅಧಿಕಾರಿಗಳು ಧರ್ಮಾಧಾರಿತ ಮನಸ್ಥಿತಿಯಲ್ಲಿದ್ದಾರೆ. ಭದ್ರಾವತಿ ವಿಭಾಗದ ಡಿಸಿಎಫ್‌, ಎಸಿಎಫ್‌ ಸೂಚನೆ ಮೇರೆಗೆ ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಅ.28ರಂದು ಅರಣ್ಯಾಧಿಕಾರಿಗಳು ಚಿತ್ರಪ್ಪ ಯರಬಾಳ್‌ ಅ‍ವರ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಚಿತ್ರಪ್ಪರ ವಯೋವೃದ್ಧ ತಂದೆ ಕೊಲ್ಲಪ್ಪ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಕಿಡಿಕಾರಿದರು.

2017ರಲ್ಲಿ ಚಿತ್ರಪ್ಪ ಯರಬಾಳ್‌ ಕುಟುಂಬದವರಿಗೆ ಸರ್ಕಾರದಿಂದ ಸ.ನಂ.44 ರಲ್ಲಿ 2 ಎಕರೆ 25 ಗುಂಟೆ ಜಮೀನು ಮಂಜೂರಾಗಿದೆ. ಅರಣ್ಯ ಇಲಾಖೆಯು ಆ ಭೂಮಿಯನ್ನು ಕಿರುಅರಣ್ಯ ಎಂದು ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವೆಯೂ ವಜಾ ಆಗಿದೆ. ಆದರೂ, ಇಲಾಖೆಯವರು ತಮ್ಮ ಭೂಮಿ ಎಂದು ದೌರ್ಜನ್ಯ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ನಾವು ಇಲ್ಲಿಗೇ ಬಿಡುವುದಿಲ್ಲ. ಗೃಹ ಸಚಿವರು, ಅರಣ್ಯ ಸಚಿವರಿಗೆ ದೂರು ನೀಡಲಿದ್ದೇವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥ ಳಕ್ಕೆ ಆಗಮಿಸಿದ ತಹಸೀಲ್ದಾರ್‌ ತನುಜ ಟಿ. ಸವದತ್ತಿ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು. ದೌರ್ಜನ್ಯಕ್ಕೆ ಒಳಗಾದ ಬೈರಾಪುರ ಗ್ರಾಮದ ಚಿತ್ರಪ್ಪ ಯರಬಾಳ್‌, ಡಿಎಸ್‌ಎಸ್‌ ಮುಖಂಡರಾದ ಓಂಪ್ರಕಾಶ್‌, ಶೆಟ್ಟಿಕೊಪ್ಪ ಮಹೇಶ್‌, ವಕೀಲ ಜಿ.ಆರ್‌. ಷಡಕ್ಷರಪ್ಪ, ಹಾಸನದ ರಂಗಸ್ವಾಮಿ, ಬೆಂಗಳೂರಿನ ಪುರುಶೋತ್ತಮ, ಬಾಳೆಹೊನ್ನೂರಿನ ಕೆ.ಕೆ.ಬಾಬಣ್ಣ, ಶಿವಮೊಗ್ಗದ ಕಾರ್ಮಿಕ ಮುಖಂಡ ಸತೀಶ, ಬೈರಾಪುರ ಬಾಬು, ಶಿವಮೊಗ್ಗದ ವಕೀಲ ಮಂಜುಳಾ ಮತ್ತಿತರರು ಇದ್ದರು.