ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ಹೊರವಲಯಯದಲ್ಲಿರುವ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು, ತಿರುವನಂತಪುರಂ ಮತ್ತು ಶಿವಮೊಗ್ಗ ಮೃಗಾಲಯಗಳ ನಡುವೆ ದೊಡ್ಡ ಪ್ರಮಾಣದ ಪ್ರಾಣಿ ವಿನಿಮಯ ನಡೆದಿದೆ.ನವದೆಹಲಿಯ ಕೇಂದ್ರಿಯ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಮತ್ತು ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ನಡೆದಿದೆ.
ಶಿವಮೊಗ್ಗ ಮೃಗಾಲಯ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮಟ್ಟಿಗೆ ಪ್ರಾಣಿಗಳ ವಿನಿಮಯಕ್ಕೆ ಸಾಕ್ಷಿಯಾಗಿದ್ದು, ಇದರೊಂದಿಗೆ ಇಲ್ಲಿರುವ ಪ್ರಾಣಿಗಳ ವಂಶವಾಹಿನಿ ಬದಲಾವಣೆಗೂ ಚಿಂತನೆ ನಡೆದಿದೆ. ಅದಕ್ಕಾಗಿಯೇ ಕೆಲವು ವಿಶಿಷ್ಟ ಜಾತಿಯ ಪ್ರಾಣಿಗಳನ್ನು ಇಲ್ಲಿಗೆ ಕರೆತರಲಾಗಿದೆ.ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಹೆಚ್ಚುವರಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮೋದನೆ ದೊರಕಿತ್ತು. ಅದರಂತೆ ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ಕೇರಳದ ತಿರುವನಂತಪುರದ ಮೃಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿಂದಲೂ ಹೆಚ್ಚುವರಿ ಪ್ರಾಣಿಗಳನ್ನು ತ್ಯಾವರೆಕೊಪ್ಪ ಮೃಗಾಲಯಕ್ಕೆ ತರಲಾಗಿದೆ.
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಟ್ರೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ಏಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್‌ಗೆ ಕಳುಹಿಸಲಾಗಿದೆ.ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್‌ನಿಂದ ಘಾರಿಯಾಲ್, ಲೇಸ್ಸರ್ ರೀಹಾ, ಸ್ಟ್ರೀಪಿಡ್ ಹೈನಾ, ಇಂಡಿಯನ್ ಕ್ರೈಸ್ಟೇಡ್ ಪೋರ್‌ಕಪೈನ್, ಸನ್ ಕೌನ್ಸರ್ ಪ್ರಾಣಿಗಳನ್ನು ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ತರಲಾಗಿದೆ.
ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಇದೇ ಮೊದಲ ಬಾರಿಗೆ ಘಾರಿಯಾಲ್ ಸೇರ್ಪಡೆಯಾಗಿದೆ. ಜೊತೆಗೆ ಪ್ರಥಮ ಬಾರಿ ಮೃಗಾಲಯಕ್ಕೆ ಸೌತ್ ಆಫ್ರೀಕನ್‌ಗೆ ಸಂಬಂಧಿಸಿದ ಪಕ್ಷಿಗಳ ಪ್ರಭೇದವಾದ ಲೇಸ್ಸರ್ ರೀಹಾ ಮತ್ತು ಸನ್ ಕೌನ್ಸರ್ ಸೇರ್ಪಡೆಯಾಗಿದೆ.*ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಬಂದ ಪ್ರಾಣಿ, ಪಕ್ಷಿಗಳು:
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಘಾರಿಯಲ್ ಮೊಸಳೆಗಳು (ಒಂದು ಗಂಡು, ಒಂದು ಹೆಣ್ಣು), ನಾಲ್ಕು ಲೆಸ್ಸೆರ್ ರಿಹ ಪಕ್ಷಗಳು (ಎರಡು ಗಂಡು, ಎರಡು ಹೆಣ್ಣು) ಒಂದು ಗಂಡು ಕತ್ತೆ ಕಿರುಬ, ಎರಡು ಮುಳ್ಳು ಹಂದಿಗಳು, ಸನ್ ಕನೂರು ಪಕ್ಷಿಗಳು ವಿನಿಮಯವಾಗಿದೆ.*ರವಾನೆಯಾಗಿರುವ ಪ್ರಾಣಿಗಳು:
ತ್ಯಾವರೆಕೊಪ್ಪದಿಂದ ತಿರುವನಂತರಕ್ಕೆ ಎರಡು ಮೊಸಳೆಗಳು, ಮೂರು ಹೆಣ್ಣು ಕತ್ತೆ ಕಿರುಬಗಳು, ಎರಡು ನರಿಗಳು. ತಾಳೆ ಬೆಕ್ಕನ್ನು ರವಾನೆ ಮಾಡಲಾಗಿದೆ.
ಮೃಗಾಲಯಕ್ಕೆ ಬಂದಿರುವ ಎಲ್ಲ ಪ್ರಾಣಿಗಳು ಆರೋಗ್ಯದಿಂದಿರುವುದಾಗಿ ಹುಲಿ-ಸಿಂಹಧಾಮ, ತ್ಯಾವರೆಕೊಪ್ಪ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಾಣಿಗಳ ಆಗಮನದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ಪ್ರಭೇದಗಳ ಸಂಖ್ಯೆ ಒಟ್ಟು 30 ರಿಂದ 34ಕ್ಕೆ ಹೆಚ್ಚಳವಾಗಿದೆ.