ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಕೋಸ್ಟಲ್ ಟೂರಿಸಂ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

| Published : Nov 22 2024, 01:15 AM IST / Updated: Nov 22 2024, 10:53 AM IST

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಕೋಸ್ಟಲ್ ಟೂರಿಸಂ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಹಿತಿಯ ಪ್ರಕಾರ ಶೇ. 99ರಷ್ಟು ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮೀನುಗಾರರಿಗೆ ಸೌಲಭ್ಯ ಒದಗಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ತಿಳಿಸಿದರು.

ಭಟ್ಕಳ: ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕರಾವಳಿ ಟೂರಿಸಂ ಪಾಲಿಸಿ ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದರು.

ಭಟ್ಕಳದ ಬೇಂಗ್ರೆ ಗಾಲ್ಫ್ ಮೈದಾನದಲ್ಲಿ ನಡೆದ ಮತ್ಸ್ಯಮೇಳ ಮತ್ತು ವಿಶ್ವಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರಾವಳಿಯಲ್ಲಿ ಕೋಮು ಗಲಭೆ, ಸಂಘರ್ಷ ನಡೆಯುತ್ತಿರುವುದು ಮತ್ತು ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವ ಹಿನ್ನೆಲೆ ಇದನ್ನು ತಡೆದು ಇಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಬಾಂಧವ್ಯ ವೃದ್ಧಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೂರೂ ಜಿಲ್ಲೆಗಳ ಅಭಿವೃದ್ಧಿಗೆ ಕರಾವಳಿ ಟೂರಿಸಂ ಪಾಲಿಸಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಚಿವ ಎಚ್.ಕೆ. ಪಾಟೀಲ ಅವರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಈ ಬಗ್ಗೆ ಮೂರು ಜಿಲ್ಲೆಗಳ ಡಿಸಿ ಅವರಿಂದಲೂ ಸಲಹೆ ಪಡೆಯಲಾಗಿದೆ ಎಂದರು.

ಕರಾವಳಿಯಲ್ಲಿ ಸಂಪನ್ಮೂಲ ಅಧಿಕವಾಗಿದ್ದರೂ ದೊಡ್ಡ ಆಸ್ಪತ್ರೆ ಮುಂತಾದವುಗಳು ಇದ್ದರೂ ಇಲ್ಲಿನ ಸ್ಥಳೀಯರಿಗೆ ಸರಿಯಾದ ಉದ್ಯೋಗ ಸಿಗದೇ ಅವರು ಮುಂಬೈ ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಉದ್ಯೋಗ ನೀಡಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದ್ದು, ಸದ್ಯದಲ್ಲೇ ಕರಾವಳಿ ಟೂರಿಸಂ ಪಾಲಿಸಿ ಜಾರಿಗೆ ತರಲಾಗುವುದು ಎಂದ ಅವರು, ಸರ್ಕಾರ ಕರಾವಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿದೆ. ಮಾಹಿತಿಯ ಪ್ರಕಾರ ಶೇ. 99ರಷ್ಟು ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮೀನುಗಾರರಿಗೆ ಸೌಲಭ್ಯ ಒದಗಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದರು. ಗ್ಯಾರಂಟಿ ಯೋಜನೆಯನ್ನು ಬಿಜೆಪಿಯವರು ಒಪ್ಪಿದ್ದಾರೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಯನ್ನು ಬಿಜೆಪಿಯವರು ಒಪ್ಪಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದರು.

ಗ್ಯಾರಂಟಿ ಯೋಜನೆ ಬಗ್ಗೆ ಪದೇ ಪದೇ ಟೀಕಿಸುತ್ತಿದ್ದ ಬಿಜೆಪಿಯವರು ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಬಿಜೆಪಿಯವರಿಗೆ ತಡವಾಗಿ ಆದರೂ ಬೆಲೆ ಏರಿಕೆಯಿಂದ ಜನರು ತತ್ತರಿಸಿರುವುದು ಅರಿವಾಗಿದೆ. ಹೀಗಾಗಿಯೇ ಇವರು ನಮ್ಮ ಗ್ಯಾರಂಟಿ ಯೋಜನೆಯನ್ನು ಒಪ್ಪಿಕೊಂಡು ಬೇರೆ ರಾಜ್ಯದಲ್ಲಿ ಅದನ್ನು ಜಾರಿಗೆ ತರಲು ಹೊರಟಿದ್ದಾರೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದರಿಂದ ರಾಜ್ಯದಲ್ಲಿ ಐದು ಮಹತ್ವದ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಯಶಸ್ವಿ ಆಗಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದರು.

ಡಿಕೆಶಿಗೆ ಬಿಜೆಪಿ ಶಾಸಕ ಹೆಬ್ಬಾರ್ ಸಾಥ್‌!

ಕಾರವಾರ: ಬಿಜೆಪಿಯಿಂದ ಕಾಂಗ್ರೆಸ್‌ನತ್ತ ವಾಲಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್‌ ಅವರು ಇಡಗುಂಜಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಸ್ವಾಗತಿಸಿ, ಸತ್ಕರಿಸಿದರು.ಡಿ.ಕೆ. ಶಿವಕುಮಾರ ಇಡಗುಂಜಿ ವಿನಾಯಕ ದೇವಾಲಯದ ಎದುರು ಬರುತ್ತಿದ್ದಂತೆ ಅವರನ್ನು ಹೆಬ್ಬಾರ್‌ ಅವರು ಸ್ವಾಗತಿಸಿ, ಶಾಲು, ಹಾರ ಹಾಕಿ ಸತ್ಕರಿಸಿದರು. ಪೂಜೆ ಕಾರ್ಯ ನೆರವೇರುವ ತನಕ ಅವರ ಜತೆಗಿದ್ದರು.ಬಿಜೆಪಿಯ ರಾಜ್ಯ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಯಾವುದೆ ಮುಖಂಡರು ಬಂದರೂ ಅಂತರ ಕಾಯ್ದುಕೊಳ್ಳುತ್ತಿರುವ ಹೆಬ್ಬಾರ್‌, ಡಿ.ಕೆ. ಶಿವಕುಮಾರ ಆಗಮಿಸಿದಾಗ ಮುಂಚೂಣಿಯಲ್ಲಿ ನಿಂತು ಸ್ವಾಗತಿಸುವ ಮೂಲಕ ಕಾಂಗ್ರೆಸ್ ಸೇರುವ ತಮ್ಮ ನಡೆಗೆ ಇಂಬು ನೀಡಿದರು.