ಸಾರಾಂಶ
ಮುತ್ತೈದೆಯರು ಆಷಾಢ ಮಾಸದಲ್ಲಿ ದೇವಿಗೆ ಅರಿಶಿನ ಕುಂಕುಮ ನೀಡಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ. ಪಟ್ಟಲದಮ್ಮ ಹಲಗೂರು ಹೋಬಳಿಯಾದ್ಯಂತ ಅಪಾರ ಭಕ್ತಾದಿಗಳನ್ನು ಒಳಗೊಂಡಿದ್ದು, ನಂಬಿರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾಳೆ. ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ, ಸೋಮವಾರ ವಿಶೇಷ ಪೂಜೆ ನಡೆಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮ ದೇವತೆ ಪಟ್ಟಲದಮ್ಮನ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ ಮೊದಲನೇ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ದೇವಿಯ ಮೂರ್ತಿಯನ್ನು ಅರ್ಚಕ ಕೃಷ್ಣಪ್ಪ ಶುಚಿಗೊಳಿಸಿ ಮುಂಜಾನೆ ತುಪ್ಪಾಭಿಷೇಕ, ಪಂಚಾಮೃತ ಅಭಿಷೇಕದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಾ ಕಾರ್ಯಕ್ರಮವನ್ನು ನಡೆಸಿದರು. ಈ ವೇಳೆ ಮಾತನಾಡಿದ ಅರ್ಚಕ ಕೃಷ್ಣಪ್ಪ, ಪಟ್ಟಲದಮ್ಮ ಹಲಗೂರು ಹೋಬಳಿಯಾದ್ಯಂತ ಅಪಾರ ಭಕ್ತಾದಿಗಳನ್ನು ಒಳಗೊಂಡಿದ್ದು, ನಂಬಿರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾಳೆ. ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ, ಸೋಮವಾರ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ತಿಳಿಸಿದರು.ಭಕ್ತರಾದ ಕವಿತಾ ಮಾತನಾಡಿ, ಮುತ್ತೈದೆಯರು ಆಷಾಢ ಮಾಸದಲ್ಲಿ ದೇವಿಗೆ ಅರಿಶಿನ ಕುಂಕುಮ ನೀಡಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ ಎಂದು ಹೇಳಿದರು.
ಹರಕೆ ಹೊತ್ತಿದ್ದ ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡುವ ಜೊತೆಗೆ ಫಲ- ತಾಂಬೂಲ ನೀಡಿ, ಹೆಸರು ಬೇಳೆ ಹಾಗೂ ಬ್ಯಾಲೆದ ಹಣ್ಣಿನ ಪಾನಕವನ್ನು ನೀಡಲಾಯಿತು. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮ್ಮಿಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.ಶ್ರೀ ಚಾಮುಂಡೇಶ್ವರಿ ದೇವಿಗೆ ಹಣ್ಣಿನ ಅಲಂಕಾರ
ಶ್ರೀರಂಗಪಟ್ಟಣ: ಆಷಾಢ ಮಾಸದ ಮೊದಲ ಶುಕ್ರವಾರ ಅಂಗವಾಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶಕ್ತಿ ದೇವತೆಗಳಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.ಪಟ್ಟಣದ ಚಾಮುಂಡೇಶ್ವರಿ ಬೀದಿಯ ಚಾಮುಂಡೇಶ್ವರಿ ದೇವಿಗೆ ಮೂಸುಂಬೆ ಹಣ್ಣು, ಬಗೆ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು. ಮೂಸುಂಬೆ ಹಣ್ಣಿನ ಅಲಂಕಾರದಿಂದ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ ದೇವಿ ವಿಶೇಷ ಅಲಂಕಾರ ನೋಡಲು ಆಗಮಿಸಿದ ಭಕ್ತರು ಸಾಲುಗಟ್ಟಿ ನಿಂತು ದೇವಿ ದರ್ಶನ ಪಡೆದರು. ಶ್ರೀ ನಿಮಿಷಾಂಬ ದೇವಿ: ಗಂಜಾಂ ಶ್ರೀನಿಮಿಷಾಂಬ ದೇವಾಲಯಕ್ಕೆ ಆಷಾಢ ಶುಕ್ರವಾರದ ಅಂಗವಾಗಿ ದೂರದ ಊರುಗಳಿಂದ ಭಕ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ದೇವಿದರ್ಶನ ಪಡೆದರು. ಪಟ್ಟಣದ ಶ್ರೀ ಲಕ್ಷ್ಮೀದೇವಿ, ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಮಹಾ ಕಾಳಿಕಾ ದೇವಾಲಯದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ನೂರಾರು ಮಂದಿ ಭಕ್ತರು ದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ
ಭಾರತೀನಗರ:ಮೊದಲನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಿತು.ಶ್ರೀಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಹೂ ಮತ್ತು ಆಭರಣಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು.ನಂತರ ವಿಶೇಷಪೂಜೆ ನಡೆಯಿತು. ಭಕ್ತರು ಸರದಿಯಲ್ಲಿ ಆಗಮಿಸಿ ದೇವಿ ದರ್ಶನ ಪಡೆದರು.
ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು. ಮಹಿಳೆಯರು ನಿಂಬೆಹಣ್ಣು, ಬೆಲ್ಲದ ಆರತಿ ಮೂಲಕ ಪೂಜೆ ಸಲ್ಲಿಸಿದರು. ಸುತ್ತ-ಮುತ್ತಲ ಗ್ರಾಮದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.