ವಿಜ್ಞಾನಕ್ಕೂ ನಿಲುಕದ ವೈಶಿಷ್ಟ್ಯಗಳ ಬೀಡು ದೇವರ ಕಾಡು!

| Published : Jul 14 2024, 01:32 AM IST

ವಿಜ್ಞಾನಕ್ಕೂ ನಿಲುಕದ ವೈಶಿಷ್ಟ್ಯಗಳ ಬೀಡು ದೇವರ ಕಾಡು!
Share this Article
  • FB
  • TW
  • Linkdin
  • Email

ಸಾರಾಂಶ

ಸಹಸ್ರಳ್ಳಿ ಗ್ರಾಮದ ಸುತ್ತಮುತ್ತಲಿನ ಧಾರ್ಮಿಕ ನಂಬಿಕೆ, ಶ್ರದ್ಧೆಯುಳ್ಳವರು ಪ್ರತಿವರ್ಷವೂ ಸುಮಾರು ನವೆಂಬರ್‌ನಿಂದ ಜನವರಿಯೊಳಗೆ ವನದುರ್ಗೆಯ ದೇವರ ಕಾಡಿನಲ್ಲಿ ಧಾರ್ಮಿಕ ಆಚರಣೆ ನಡೆಸಿಕೊಂಡು ಬಂದಿದ್ದಾರೆ.

ಶಂಕರ ಭಟ್ಟ ತಾರೀಮಕ್ಕಿ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪ್ರಕೃತಿಯ ಕೊಡುಗೆ ಅನನ್ಯವಾದುದು. ಮಾನವ ತಲೆತಲಾಂತರಗಳಿಂದ ನಂಬಿಕೊಂಡು ಬಂದ ಅನೇಕ ಸನ್ನಿವೇಶ, ಘಟನೆಗಳನ್ನು ಪ್ರಕೃತಿಯಲ್ಲಿ ಕಾಣಬಹುದಾಗಿದೆ. ಆಧುನಿಕ ವಿಜ್ಞಾನಕ್ಕೂ ನಿಲುಕದ ಅನೇಕ ವಿಶೇಷಗಳು ಪ್ರಕೃತಿಯ ಕೊಡುಗೆಯೇ ಆಗಿದ್ದರೂ, ಇದನ್ನು ದೇವರ ಕೊಡುಗೆ ಎಂದೇ ನಾವು ಭಾವಿಸುತ್ತೇವೆ. ಇಂತಹ ವಿಶೇಷವೊಂದು ಯಲ್ಲಾಪುರದ ಮುಂಡಗೋಡು ರಸ್ತೆಯ ದೇವರಕಾಡಿನಲ್ಲಿ ಕಂಡುಬರುತ್ತದೆ. ಇಲ್ಲಿ ವಿಶೇಷವಾಗಿ ನೂರಾರು ಜಾತಿಯ ವನಸ್ಪತಿಯ ಗಿಡ-ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ವನಸ್ಪತಿ ತಜ್ಞರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಪ್ರದೇಶದ ಅರಣ್ಯ ಮತ್ತು ವನಸ್ಪತಿ ಸಸ್ಯಗಳ ಸಂರಕ್ಷಣೆ ತೀರಾ ಅಗತ್ಯವಾಗಿದೆ.

ಸಹಸ್ರಳ್ಳಿ ಗ್ರಾಮದ ಸುತ್ತಮುತ್ತಲಿನ ಧಾರ್ಮಿಕ ನಂಬಿಕೆ, ಶ್ರದ್ಧೆಯುಳ್ಳವರು ಪ್ರತಿವರ್ಷವೂ ಸುಮಾರು ನವೆಂಬರ್‌ನಿಂದ ಜನವರಿಯೊಳಗೆ ''ವನದುರ್ಗೆಯ ದೇವರ ಕಾಡಿ''ನಲ್ಲಿ ಧಾರ್ಮಿಕ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿವರ್ಷವೂ ಸತ್ಯನಾರಾಯಣ ವ್ರತ, ಸಂಜೆ ಕಾರ್ತೀಕೋತ್ಸವಗಳನ್ನು ''ಹೊಸಬೆಳೆ ಹಬ್ಬದ'' ಪ್ರಯುಕ್ತ ಆಚರಿಸಲಾಗುತ್ತಿದೆ. ಊರಿನ ೨೦೦-೩೦೦ ಜನರೂ ಪಾಲ್ಗೊಳ್ಳುತ್ತಾರೆ. ಸಹಸ್ರಳ್ಳಿಯ ಗಣಪತಿ ರಾಮಚಂದ್ರ ಭಟ್ಟ ಅವರ ಕುಟುಂಬದವರು ಅರ್ಚಕರಾಗಿ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ.

ಅಭಿವೃದ್ಧಿ ಕಾರ್ಯ

ಇದು ಅನೇಕ ಕಡೆ ನಡೆಯಬಹುದು. ಆದರೆ ಇಲ್ಲಿನ ಮತ್ತೊಂದು ಪ್ರಮುಖ ವಿಶೇಷವೆಂದರೆ ಪ್ರತಿವರ್ಷವೂ ೧೦-೨೦ ಮಡಿಕೆಗಳು ಮಣ್ಣಿನಿಂದ ತಾನೇ ಎದ್ದು ಬರುತ್ತಿವೆ. ಇವುಗಳನ್ನು ಮತ್ತು ಮರದ ಬುಡವನ್ನು ಪೂಜಿಸುವ ಸಂಪ್ರದಾಯವಿದೆ. ವೈಜ್ಞಾನಿಕ ಯುಗದಲ್ಲಿರುವ ನಾವು ಮಡಿಕೆ ಸಹಜವಾಗಿಯೇ ಎದ್ದು ಬರುತ್ತದೆ ಎಂದರೆ ಅನೇಕರು ಒಪ್ಪದಿರಬಹುದು. ಅರಣ್ಯ ಇಲಾಖೆಯ ಅಧಿಕಾರಿಗಳೇ ಕೆಲವು ವರ್ಷಗಳಿಂದ ಅದನ್ನು ಗಮನಿಸಿ, ಈ ಘಟನೆ ವಾಸ್ತವಕ್ಕೆ ಹತ್ತಿರವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಸ್ಥಳೀಯರ ಆಗ್ರಹದಂತೆ ಇಲ್ಲಿ ಒಂದು ಪ್ರವಾಸಿ ತಾಣವೂ ನಿರ್ಮಾಣಗೊಂಡು, ಸ್ಥಳೀಯರ ಭಕ್ತಿಕೇಂದ್ರವೂ ಆಗುವಂತಾಗಬೇಕು. ತನ್ಮೂಲಕ ಪಟ್ಟಣದ ಬಳಿಯಿರುವ ದಟ್ಟ ಅರಣ್ಯವೂ ಸಂರಕ್ಷಣೆಯಾಗಬೇಕು ಎಂಬುದನ್ನು ಚಿಂತಿಸಿದ ಅರಣ್ಯ ಇಲಾಖೆ ಇದಕ್ಕೆ ₹೨೦ ಲಕ್ಷ ವೆಚ್ಚದ ಯೋಜನೆಯನ್ನು ರೂಪಿಸಿ, ಸುಂದರವಾದ ದೇವರಕಾಡಿನ ಮುಖದ್ವಾರ, ವಾಕ್‌ಪಾಥ್ ಮತ್ತು ನಿರ್ಗಮನದ ದಾರಿಯಲ್ಲಿ ಗುಹೆಯ ಮಾದರಿಯನ್ನು ನಿರ್ಮಿಸಿದ್ದಾರೆ.

ಅರಣ್ಯ ಇಲಾಖೆಯ ಮುಂಡಗೋಡು ರಸ್ತೆಯ ಸಾರಿಗೆ ಸಂಸ್ಥೆಯ ಡಿಪೋ ಪಕ್ಕದ ೩೨-೧೯ ಬ್ಲಾಕ್ ಕಂಪಾರ್ಟ್ಮೆಂಟಿನಲ್ಲಿ ೭೪ ಹೆಕ್ಟೇರ್ (ಸುಮಾರು ೧೫೦ ಎಕರೆ) ಗಿಂತ ಅಧಿಕ ಅರಣ್ಯ ಪ್ರದೇಶವನ್ನು ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗಿದೆ.

ಪಟ್ಟಣದ ಔಷಧೀಯ ತ್ಯಾಜ್ಯಗಳು ಸೇರಿದಂತೆ ಅನೇಕ ತ್ಯಾಜ್ಯಗಳನ್ನು ತಂದು ಈ ಕಾಡಿನ ನಡುವೆ ರಾಶಿ ಹಾಕಲಾಗುತ್ತಿತ್ತು. ೧೦-೨೦ ಲಾರಿಗಟ್ಟಲೇ ತ್ಯಾಜ್ಯಗಳನ್ನು ಅರಣ್ಯ ಇಲಾಖೆ ಬೇರೆಡೆ ಸಾಗಿಸಿ, ಇಲ್ಲಿನ ಪಾವಿತ್ರ್ಯತೆಗೆ ಮತ್ತು ಅರಣ್ಯ ರಕ್ಷಣೆಗೆ ಮಹತ್ವ ನೀಡಿದೆ. ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಎ.ಸಿ. ಎಫ್. ಆನಂದ್ ಎಚ್.ಎ., ವಲಯಾರಣ್ಯಾಧಿಕಾರಿ ಎಲ್.ಎ. ಮಠ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಅಲ್ತಾಫ್ ಚೌಕಡಾಕ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಕಾಡಿನಲ್ಲಿರುವ ಬಹುತೇಕ ಎಲ್ಲ ಮರಗಳಿಗೂ ಆಯಾ ಮರದ ಜಾತಿಯ ನಾಮಫಲಕಗಳನ್ನು ಅಳವಡಿಸಲಾಗಿದೆ. ಅಂತೆಯೇ ವನಸ್ಪತೀ ಗಿಡಗಳಿಗೂ ನಾಮಫಲಕ ಅಳವಡಿಸಿದರೆ ಇನ್ನೂ ಹೆಚ್ಚಿನ ಮೆರಗು ದೊರೆಯಲು ಸಾಧ್ಯ.

ಪ್ರಸ್ತುತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಹರ್ಷಭಾನು, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಹಿಮವತಿ ಭಟ್ಟ ಮತ್ತು ವಲಯಾರಣ್ಯಾಧಿಕಾರಿ ಎನ್.ಎಲ್. ನದಾಫ್ ಇವರು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಿ, ಇಲ್ಲಿನ ವಿಶೇಷ ವನಸ್ಪತಿಯ ಮಹತ್ವವನ್ನು ಹೊರ ಜಗತ್ತಿಗೆ ತೋರಿಸುವ ಜೊತೆ ಉಳಿಸುವ ಕಾರ್ಯ ಮಾಡುವರೆಂಬುದು ಇಲ್ಲಿನ ಜನರ ಭರವಸೆಯಾಗಿದೆ.