ಶಿರಹಟ್ಟಿ: ಮಹಿಳೆಯರು ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ, ವ್ಯವಹಾರ, ಕಲೆ ಮತ್ತು ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅಂತರಿಕ್ಷಕ್ಕೆ ತೆರಳಿ ಹೆಮ್ಮೆ ಹೆಚ್ಚಿಸಿದ್ದಾರೆ. ವಿಶ್ವಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಹೇಳಿದರು.

ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದು, ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅವರು ಕಾಲಿರಿಸಿ ಗಣನೀಯವಾದ ಸಾಧನೆ ಮಾಡಿದ್ದಾರೆ. ಇಂದು ಪುರುಷರಿಗಿಂತ ಮಹಿಳೆಯರು ಕಡಿಮೆಯೇನಿಲ್ಲ ಎಂದು ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.

ಮಹಿಳೆಯರು ವೈದ್ಯಕೀಯ, ವಿಜ್ಞಾನ, ಬಾಹ್ಯಾಕಾಶ ಸೇರಿ ಎಲ್ಲ ರಂಗದಲ್ಲಿಯೂ ಸಾಧನೆ ತೋರಿಸಿದ್ದಾರೆ. ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಸಮಾಜದಲ್ಲಿ ತನ್ನದೇ ಆದ ಮಹೋನ್ನತ ಪಾತ್ರ ನಿಭಾಯಿಸುವ ಪೂಜ್ಯಳು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಗಳಿ ಕಡಿಮೆ ಇದ್ದವು. ಆದರೆ, ಇಂದು ಮಹಿಳೆ ಕೇವಲ ಮನೆಯ ಜವಾಬ್ದಾರಿ ಮಾತ್ರವಲ್ಲ ಸಮಾಜ ನಿರ್ಮಾಣದ ಶಕ್ತಿ ಎಂದು ತಿಳಿಸಿದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಮಹಿಳೆ ಕುಟುಂಬದ ಶಕ್ತಿ. ಸಮಾಜದ ಆಧಾರ ಮತ್ತು ದೇಶದ ಅಭಿವೃದ್ಧಿಯ ಪ್ರಮುಖ ಭಾಗ. ತಮ್ಮ ಪರಿಶ್ರಮ ಮತ್ತು ದೈರ್ಯದಿಂದ ಅವರು ಸಮಾಜದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಹೆಣ್ಣು ಜಗದ ಕಣ್ಣು. ಮನೆಯನ್ನು ಸಮಾಜವನ್ನು ಬೆಳಗಲು ಹೆಣ್ಣು ಮಗು ಅವಶ್ಯಕ. ಅವರನ್ನು ಗೌರವಿಸುವ ಸಂಸ್ಕೃತಿ ನಮ್ಮದು ಎಂದು ತಿಳಿಸಿದರು.


ಸಮಾನತೆ, ಸ್ವಾತಂತ್ರ‍್ಯ ಹಾಗೂ ಸಹೋದರತ್ವ ಭಾವನೆಯಿಂದ ಹೆಣ್ಣು ಮಕ್ಕಳಿಗೆ ಎಲ್ಲಿಯೂ ಹಾಗೂ ಯಾವುದೇ ಸಂದರ್ಭದಲ್ಲಿ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕಾಗಿದೆ. ಪ್ರತಿ ಕ್ಷೇತ್ರಗಳಲ್ಲಿ ಮಹಿಳೆ ಉತ್ತಮ ಸಾಧನೆ ಮಾಡುತ್ತಿದ್ದು, ಇದಕ್ಕೆ ಇತ್ತೀಚಿಗೆ ಜರುಗಿದ ಕೆಲ ವಿದ್ಯಮಾನಗಳೇ ಸಾಕ್ಷಿಯಾಗಿವೆ. ಪ್ರಾಮಾಣಿಕತೆ, ಛಲ ಹಾಗೂ ಆತ್ಮಸ್ಥೈರ್ಯಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲು ಹೆಚ್ಚು ಕಂಡುಬಂದಿದೆ. ಅವರ ಅದ್ವೀತಿಯ ಸಾಧನೆ ಶ್ಲಾಘನೀಯವಾದುದು ಎಂದು ಹೇಳಿದರು.ಇಂದು ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಶಿಕ್ಷಣ ಪಡೆಯುವ ಮೂಲಕ ಒಂದು ಮನೆಯ ನಂದಾದೀಪವಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಇಡೀ ಜಗದ ಕಣ್ಣಾಗಿ ಕಾರ್ಯನಿರ್ವಹಿಸುತ್ತಾಳೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತ ಹೆಣ್ಣು ಮಕ್ಕಳು ಸಮಾಜದ ಉನ್ನತ ಸ್ಥಾನಮಾನಗಳಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಸಾಮಾಜಿಕ ಭೇದ-ಭಾವ ಇಲ್ಲದೆ ಎಲ್ಲ ಹೆಣ್ಣು ಮಕ್ಕಳನ್ನು ಗೌರವ ಭಾವನೆಯಿಂದ ಕಾಣುವಂತಾಗಬೇಕು ಎಂದು ತಿಳಿಸಿದರು.

ಹೆಣ್ಣು ಮಕ್ಕಳು "ಧೈರ್ಯಂ ಸರ್ವತ್ರ ಸಾಧನಂ " ಎನ್ನುವ ಆತ್ಮಸ್ಥೈರ್ಯದೊಂದಿಗೆ ಮುನ್ನಡೆಯಬೇಕು. ಉನ್ನತ ಗುರಿ ಉದ್ದೇಶಗಳೊಂದಿಗೆ ಶಿಕ್ಷಣವನ್ನು ಪಡೆದು, ಒಂದು ಕುಟುಂಬಕ್ಕೆ, ಸಮಾಜಕ್ಕೆ, ಈ ದೇಶಕ್ಕೆ ಉನ್ನತ ಕೊಡುಗೆ ನೀಡಬೇಕು. ಸೇವಾ ಮನೋಭಾವದಿಂದ ಹೆಣ್ಣು ಮಕ್ಕಳ ಕ್ರಿಯಾಶೀಲ ಕಾರ್ಯನಿರ್ವಹಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂದಾ ಕಪ್ಪತ್ತನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೀರಮ್ಮ ಕಳಸಾಪುರ, ರತ್ನಾ ಬದಿ, ರೇಣುಕಾ ಜಗಂಡಭಾವಿ, ನೀಲಮ್ಮ ನಿಟ್ಟಾಲಿ, ಗೀತಾ ಹಸಲೂರ, ಶಾಂತಾ ಪಾಟೀಲ ಸೇರಿ ಅನೇಕರು ಇದ್ದರು.