- 191ನೇ ಜಯಂತಿಯಲ್ಲಿ ಡಾ.ಬಸವಪ್ರಭು ಶ್ರೀ ಶ್ಲಾಘನೆ । ಎಸ್ಸೆಸ್ಸೆಲ್ಸಿ ಅಂಕವೀರರಿಗೆ ಸನ್ಮಾನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಅಥಣಿ ಶಿವಯೋಗಿಗಳು ಈ ನಾಡು ಕಂಡ ಮಹಾನ್ ತಪಸ್ವಿಗಳು. ಯೋಗಿಗಳು ಮಾತ್ರವಲ್ಲದೇ, ಬಸವತತ್ವ ನಿಷ್ಠರು ಆಗಿದ್ದಾರೆ. ಬಸವತತ್ವಗಳನ್ನು ಎಂದಿಗೂ ಬೋಧಿಸದೇ ತಮ್ಮ ಜೇವನದಲ್ಲಿ ಆಚರಿಸಿ ತೋರಿದ ಮಹಾತ್ಮರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.ಇಲ್ಲಿನ ಶಿವಯೋಗಿ ಮಂದಿರದ ಶ್ರೀ ಜಗದ್ಗುರು ಜಯದೇವ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಸಂಜೆ ಶ್ರೀ ಅಥಣಿ ಶಿವಯೋಗಿಗಳ ಸಾಂಸ್ಕೃತಿಕ ಭಜನಾ ಸಂಘ, ಬಸವ ಕೇಂದ್ರ ವಿರಕ್ತ ಮಠ, ಶಿವಯೋಗಾಶ್ರಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಿಂ. ಶ್ರೀ ಅಥಣಿ ಮುರುಘೇಂದ್ರ ಶಿವಯೋಗಿಗಳ 191ನೇ ಜಯಂತ್ಯುತ್ಸವ, ಎಸ್ಸೆಸ್ಸೆಲ್ಸಿ ಪ್ರತಿಭಾವಂತ ಮಕ್ಕಳಿಗೆ ಮಹಿಳಾ ಬಸವ ಕೇಂದ್ರದಿಂದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಆಧುನಿಕ ಜೀವನದಲ್ಲಿ ಎಲ್ಲರಿಗೂ ಹಣವೇ ಮುಖ್ಯವಾಗಿದೆ. ಹಣದ ವ್ಯಾಮೋಹ ಅಂದಿಗಿಂತ ಇಂದು ಹೆಚ್ಚಾಗಿದೆ. ಹಣದ ಹುಚ್ಚಿನಿಂದ ಮಾನವನ ನೆಮ್ಮದಿ ಕಣ್ಮರೆಯಾಗಿದೆ. ಜೀವನ ಸಾಗಿಸಲು ಹಣ ಬೇಕು. ಆದರೆ ಹಣದ ವ್ಯಾಮೋಹ ನಮಗೆ ಬೇಡ ಎಂಬುದನ್ನು ಶಿವಯೋಗಿಗಳು ಅರಿತಿದ್ದರು. ಬಸವಣ್ಣನವರು ನೀಡಿದ ಇಷ್ಟಲಿಂಗವನ್ನು ಹಿಡಿದು ಶಿವಯೋಗ ಸಾಧನೆ ಮಾಡಿದ್ದರಿಂದ ಅವರಿಗೆ ಶಿವಯೋಗಿ ಎಂದು ಭಕ್ತರು ಗೌರವಿಸಿದರು. ಚಿತ್ರದುರ್ಗ ಮುರುಘಾ ಮಠಕ್ಕೆ ಜಗದ್ಗುರು ಆಗಿದ್ದರಿಂದ ಜಯದೇವ ಜಗದ್ಗುರು ಇವತ್ತಿನ ಶಿವಯೋಗಾಶ್ರಮ ಕಟ್ಟಡದ ಈ ಜಾಗಕ್ಕೆ ಶಿವಯೋಗಿ ಮಂದಿರ ಎಂದು ಕರೆದರು. ತಮ್ಮ ಸಮಾಧಿಯ ಪಕ್ಕದಲ್ಲಿಯೇ ಅಥಣಿ ಶಿವಯೋಗಿಗಳ ತೋರು ಗದ್ದುಗೆಯನ್ನು ಸ್ಥಾಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ರಾಣೆಬೆನ್ನೂರು ಎಸ್‌ಜೆಎಂ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ವಿ. ಹೆಗಡಾಳ ಅವರು ಶಿವಯೋಗಿಗಳ ಆದರ್ಶ ಜೀವನ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಮಹದೇವಮ್ಮ, ಭಜನಾ ಸಂಘದ ಅಧ್ಯಕ್ಷ ಜಯದೇವಪ್ಪ, ಟ್ರಸ್ಟಿನ ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಹಾಸಬಾವಿ ಕರಿಬಸಪ್ಪ, ಕುಂಟೋಜಿ ಚನ್ನಪ್ಪ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ, ಎಂ.ಸಿ.ರೇಖಾ, ಸುಜಾತ, ವೀಣಾ ಮಂಜುನಾಥ, ಇತರರು ಇದ್ದರು.
- - --15ಕೆಡಿವಿಜಿ40: ದಾವಣಗೆರೆಯಲ್ಲಿ ನಡೆದ ಲಿಂ.ಅಥಣಿ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮವನ್ನು ಡಾ.ಬಸವಪ್ರಭು ಸ್ವಾಮೀಜಿ ಅವರು ಅಥಣಿ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು.