ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಮಿಕರು ಸೇರಿ ಯಾವುದೇ ಕೂಲಿ ಕೆಲಸಕ್ಕೆ ಸರ್ಕಾರ ನಿಗದಿಪಡಿಸಿರುವ ಎಂಟು ಗಂಟೆಗಳ ಕನಿಷ್ಠ ದಿನಗೂಲಿ ₹581.72 ಆಗಿದ್ದು, ಇದಕ್ಕಿಂತ ಕಡಿಮೆ ವೇತನ ನೀಡುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಹೇಳಿದರು.

ನಿಗದಿತ ವೇತನ ದೊರೆಯದಿದ್ದರೆ ಕಾರ್ಮಿಕ ಇಲಾಖೆಗೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಪಡೆಯಬಹುದು ಎಂದು ಸಲಹೆ ನೀಡಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ರೇಷ್ಮೆಗೂಡು ಮಾರುಕಟ್ಟೆ ಸಭಾಂಗಣದಲ್ಲಿ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಮಿಕರಿಗಾಗಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ಉಚಿತ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲಕಾರ್ಮಿಕರ ನೇಮಕ ಸಂಪೂರ್ಣ ಕಾನೂನುಬಾಹಿರವಾಗಿದ್ದು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು, 14 ರಿಂದ 18 ವರ್ಷದೊಳಗಿನವರನ್ನು ರೇಷ್ಮೆ ನೂಲು ಬಿಚ್ಚಣಿಕೆಯಂತಹ ಅಪಾಯಕಾರಿ ಕೆಲಸಗಳಿಗೆ ನೇಮಿಸುವುದು ಅಪರಾಧ ಎಂದು ಅವರು ಎಚ್ಚರಿಸಿದರು.


ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ತಿಳಿಸಿದ ಅವರು, ಆರ್ಥಿಕ ಸಂಕಷ್ಟದ ನೆಪದಲ್ಲಿ ಮಕ್ಕಳ ಶಿಕ್ಷಣ ಮೊಟಕುಗೊಳಿಸದೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಶಬಾನಾ ಅಜ್ಮಿ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ ಕಡ್ಡಾಯ ಎಂದು ತಿಳಿಸಿ, ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಯೋಜನೆಯಡಿ ಶಿಡ್ಲಘಟ್ಟದಲ್ಲಿ ಈಗಾಗಲೇ 440 ಕಾರ್ಮಿಕರಿಗೆ ಕಾರ್ಡ್ ವಿತರಿಸಲಾಗಿದೆ ಎಂದರು. ನೋಂದಾಯಿತ ಕಾರ್ಮಿಕರಿಗೆ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ₹1 ಲಕ್ಷ ಹಾಗೂ ವೈದ್ಯಕೀಯ ನೆರವಿಗೆ ₹50,000ವರೆಗೆ ಸೌಲಭ್ಯ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಉಮೇಶ್, ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಮನೋಹರ್, ಕಾರ್ಮಿಕ ನಿರೀಕ್ಷಕಿ ಎಂ. ಮಂಜುಳಾ ಹಾಜರಿದ್ದರು.