ಹಿಂದು ಕಾರ್ಯಕರ್ಕರ ಮೇಲೆ ಹಲ್ಲೆ: ನಾಲ್ವರ ಬಂಧನ

| Published : Jul 01 2025, 12:47 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಹಿಂದು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಹಿಂದು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ವಿಡಿಯೋ ಸಾಮಾಜಿಕ ಜಾಲಜಾಣಗಳಲ್ಲಿ ವೈರಲ್‌ ಆಗಿದೆ. ಇದು ದುರದೃಷ್ಟಕರ ಘಟನೆಯಾಗಿದೆ. ಆ ಘಟನೆಯಲ್ಲಿ ನೊಂದವರನ್ನು ಸಂಪರ್ಕಿಸಿದರೇ ಅವರು ಸಿಕ್ಕಿಲ್ಲ. ಹಾಗಾಗಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.ಕಳೆದ ಜೂ.26 ರಂದು ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ತಡೆದಿದ್ದರು. ಐದು ಹಸುಗಳು ವಾಹನದಲ್ಲಿದ್ದವು. ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಇಬ್ಬರು ಪರಸ್ಪರ ಯಾವುದೇ ತಕರಾರು ಇಲ್ಲ ಎಂದು ಪತ್ರ ಬರೆದುಕೊಟ್ಟು ಹೋಗಿದ್ದರು. ನಂತರ ಆ ದಿನವೇ ಗೋವುಗಳನ್ನ ಗೋ ಶಾಲೆಗೆ ಕಳುಹಿಸಿ ಕೊಟ್ಟಿದ್ದರು. 28 ರಂದು ಗೋ ಶಾಲೆಗೆ ಹೋಗಿ ದನದ ಮಾಲೀಕ ಗೋವು ಬಿಡಿಸಿಕೊಳ್ಳಲು ಹೋಗಿದ್ದ. ಆತನನ್ನ ಶ್ರೀರಾಮ ಸೇನೆ ಕಾರ್ಯಕರ್ತರು ಹಿಂಬಾಲಿಸಿಕೊಂಡು ಹೋಗಿ ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗಿದ್ದರು ಎಂದರು.ಮನೆಯಲ್ಲಿ ಹೆಣ್ಣು ಮಕ್ಕಳಿರುವ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗುತ್ತಾರೆ. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಸೇರಿದ್ದಾರೆ. ಬಳಿಕಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಎಂದು ಬರೆದುಕೊಟ್ಟು ಹೋಗಿದ್ದರು. ನಿನ್ನೆ ವಿಡಿಯೋ ಹೊರ ಬಂದಾಗ ನೋಡಿ ನಮಗೂ ಬಹಳ ಬೇಜಾರು ಆಯಿತು. ಇದೊಂದು ಘೋರ ಘಟನೆ. ಶ್ರೀರಾಮ ಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಒಂದೇ ಸಮುದಾಯದವರಷ್ಟೇ ಹಲ್ಲೆ ಮಾಡಿಲ್ಲ. ಅದರಲ್ಲಿ ಎಲ್ಲ ಸಮುದಾಯದವರು ಇದ್ದರು. ಎಲ್ಲರೂ ಸೇರಿಯೇ ಹಲ್ಲೆ ನಡೆಸಿದ್ದಾರೆ ಎಂದರು.ಗಡಿ ಪಾರಾಗಿದ್ದ ರೌಡಿ ಬಂದಿದ್ದೇಕೆ?

ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ ಸೊಲ್ಲಾಪುರ ರೌಡಿಶೀಟರ್‌ ಆಗಿದ್ದು, ಆತನನ್ನು ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು. ಆದರೆ, ಆತ ಏಕೆ ಬಂದಿದ್ದ ಎಂಬುವುದರ ಕುರಿತು ತನಿಖೆ ಮಾಡಲಾಗುವುದು. ಮಹಾವೀರ ಸೊಲ್ಲಾಪುರೆ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ರೌಡಿ ಶೀಟರ್‌ ಯಾವುದೋ ಒಂದು ಸಂಘಟನೆ ಹೆಸರು ಹೇಳಿಕೊಂಡಿದ್ದಾನೆ. ಆತನಿಗೆ ಸಂಘಟನೆಯವರು ಏಕೆ ಬೆಂಬಲ ನೀಡುತ್ತಿದೆ ಎಂದು ಭೀಮಾಶಂಕರ ಗುಳೇದ ಪ್ರಶ್ನಿಸಿದರು.ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಹಿಂದು ಪರ ಸಂಘಟನೆಗಳು ಇಂಗಳಿ ಚಲೋಗೆ ಕರೆ ನೀಡಿವೆ. ಆದರೆ, ಹಿಂದು ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.