ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕಾಗಿದೆ. ಭಾಷೆಯನ್ನು ಬಳಸಿದಾಗ ಮಾತ್ರ ಅದನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.
ಅವರು ನಗರದ ಶ್ರೀ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃಭಾಷೆಗೆ ಅಪಾರ ಶಕ್ತಿ ಇದ್ದು, ಕಲಿಕೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಭಾಷಾ ಸಂಪತ್ತು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿ ಆಗಲಿದೆ ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೂ ಕನ್ನಡದಲ್ಲೇ ಬೋಧನೆ, ಸಂಶೋಧನೆ ನಡೆಸುವ ಪ್ರಯತ್ನಗಳು ಹೆಚ್ಚಬೇಕು. ಕನ್ನಡದ ಅನನ್ಯ ಪರಂಪರೆಯನ್ನು ಮುಂದುವರೆಸಲು ಮುಂದಿನ ಪೀಳಿಗೆಗಾಗಿ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದರು.
ಶ್ರೀ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೇಣುಗೋಪಾಲ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಅವಕಾಶವಿದೆ. ಸಾಧನೆ ಮಾಡುವ ಪ್ರತಿಭಾವಂತರಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅವಕಾಶಗಳಿಗೆ. ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಾದ ಎನ್.ಶ್ರೀನಿವಾಸ್, ಬಾಲಕೃಷ್ಣ, ಶಶಾಂಕ್, ಮುನಿರಾಜು, ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಭಾರತ ಸೇವಾದಳ ಅಧಿಕಾರಿ ಎಸ್.ಬೋರಪ್ಪ, ತಾ.ಕಸಾಪ ಕಾರ್ಯದರ್ಶಿ ಎ.ಜಯರಾಮ್, ಪ್ರತಿನಿಧಿಗಳಾದ ಕೋದಂಡರಾಮ್, ಷಫೀರ್, ಕಸಬಾ ಹೋಬಳಿ ಕಸಾಪ ಘಟಕದ ಅಧ್ಯಕ್ಷ ದಾದಾಪೀರ್, ಗೌರವ ಕಾರ್ಯದರ್ಶಿ ಗಿರೀಶ್ ಬರಗೂರು, ತೂಬಗರೆ ಕಸಾಪ ಘಟಕದ ಗೌರವ ಕಾರ್ಯದರ್ಶಿ ಉದಯರಾಧ್ಯ ಮತ್ತಿತರರು ಭಾಗವಹಿಸಿದ್ದರು.