ದೇವರ ಮರ ಕಡಿಯಲು ಯತ್ನ: ಭಕ್ತರ ಆಕ್ರೋಶ

| Published : Jun 07 2024, 12:15 AM IST

ಸಾರಾಂಶ

ನಗರದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 15 ವರ್ಷದ ಹತ್ತಿ ಮರ, ಅರಳಿಮರ, ಬೇವಿನ ಮರಗಳಿದ್ದು ಭಕ್ತರು ಹಿಂದಿನಿಂದಲೂ ಪೂಜಿಸಿಕೊಂಡು ಬರುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ತಿಪಟೂರು

ನಗರದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 15 ವರ್ಷದ ಹತ್ತಿ ಮರ, ಅರಳಿಮರ, ಬೇವಿನ ಮರಗಳಿದ್ದು ಭಕ್ತರು ಹಿಂದಿನಿಂದಲೂ ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಗುರುವಾರ ಬೆಳಗ್ಗೆ ಈ ಮರಗಳನ್ನು ಕೆಲವರು ಕಡಿಯಲು ಪ್ರಯತ್ನಿಸಿದ್ದು, ಭಕ್ತರು ವಿರೋಧಿಸಿದ್ದಕ್ಕೆ ಒಂದು ಕೊಂಬೆ ಕತ್ತರಿಸಿ ಪರಾರಿಯಾಗಿದ್ದಾರೆ. ಕಾಂಪೌಂಡ್ ನಿರ್ಮಾಣದ ನೆಪದಿಂದ ಹದಿನೈದು ವರ್ಷದ ಹಿಂದಿನ ದೇವಾಲಯದ ಆವರಣದಲ್ಲಿರುವ ಮರಗಳನ್ನು ಕಡಿಯಲು ಯತ್ನಿಸಿದ್ದು, ಸಾರ್ವಜನಿಕರ ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ತಿಂಗಳ ಹಿಂದೆ ಕಾಂಪೌಂಡ್ ನೆಪವೊಡ್ದಿ ಮರಗಳನ್ನು ಕಡಿಯಬಾರದೆಂದು ಪರಿಸರ ಪ್ರೇಮಿ ಮಂಜುನಾಥ್ ಎಂಬುವವರು ಅರಣ್ಯ ಇಲಾಖೆಗೆ ಮನವಿ ನೀಡಿದ್ದಾರೆ. ಇದ್ಯಾವುದು ತಾಲೂಕು ಆಡಳಿತ, ಅರಣ್ಯ ಇಲಾಖೆಯ ಗಮನಕ್ಕೂ ಬಾರದೆ ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಿರುವುದು ಯಾರು ಎಂಬುದು ತಿಳಿದಿಲ್ಲ.

ಅರಣ್ಯ ಇಲಾಖೆಯವರನ್ನು ಕೇಳಿದರೆ ನಾವು ಮರ ಕಡಿಯಲು ಅನುಮತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಭಕ್ತರು ಮಾತ್ರ ಮರಗಳಿಗೆ ಹಾನಿಯಾಗದಂತೆ ಕಾಂಪೌಂಡ್ ನಿರ್ಮಿಸಿ ಇಲ್ಲವಾದಲ್ಲಿ ದೇವಾಲಯದ ಬಳಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.