ಸಾರಾಂಶ
ಗೋವಿನಕೋವಿ ಗ್ರಾಮಸ್ಥರು,ವಿದ್ಯಾರ್ಥಿಗಳು ಭಾಗಿ
ಕನ್ನಡಪ್ರಭ ವಾರ್ತೆ, ಹೊನ್ನಾಳಿಹೊನ್ನಾಳಿ ಮೂಲಕ ಶಿವಮೊಗ್ಗದ ಕಡೆಗೆ ಓಡಾಡುವ ಕೆಎಸ್ಆರ್ ಟಿಸಿ ಬಸ್ ಗಳ ಸಂಖ್ಯೆ ಹೆಚ್ಚಿಸುವ ಹಾಗೂ ದಾವಣಗೆರೆ, ಹರಿಹರ ಕಡೆಯಿಂದ ಶಿವಮೊಗ್ಗಕ್ಕೆ ಓಡಾಡುವ ನಾನ್ - ಸ್ಟಾಪ್ (ತಡೆ ರಹಿತ ) ಬಸ್ ಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಬೆಳಗ್ಗೆ ಗೋವಿನ ಕೋವಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ಗಳನ್ನು ತಡೆದು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಬೆಳಗ್ಗೆ ಗೋವಿನಕೋವಿ, ಚೀಲೂರು ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಶಿವಮೊಗ್ಗಕ್ಕೆ ವಿವಿಧ ಶಾಲಾ ಕಾಲೇಜುಗಳಿಗೆ ಓದಲು ವಿದ್ಯಾರ್ಥಿಗಳು ಪ್ರತಿನಿತ್ಯ ಹೋಗುತ್ತಾರೆ. ಆದರೆ ಬೆಳಗಿನ ಸಮಯದಲ್ಲಿ ಈ ಮಾರ್ಗವಾಗಿ ಹೋಗುವ ಬಸ್ ಗಳಲ್ಲಿ ಉಚಿತ ಪ್ರಯಾಣದ ಕಾರಣ ಮಹಿಳೆಯರೇ ತುಂಬಿರುತ್ತಾರೆ. ನಿಲ್ಲಲೂ ಜಾಗವಿರಲ್ಲ. ಕೆಲ ಸಂದರ್ಭದಲ್ಲಿ ಬಸ್ ಗಳು ನಿಲ್ಲಿಸದೇ ಹಾಗೇ ಹೋಗುತ್ತವೆ ಎಂದರು.
ಇನ್ನು ದಾವಣಗೆರೆ ಹರಿಹರದಿಂದ ತಡೆರಹಿತ ಎಂದು ಬೋರ್ಡ ಹಾಕಿದ ಬಸ್ ಗಳು ನಿಲ್ಲಸದೇ ಹೋಗುತ್ತಿ ರುವುದರಿಂದ ಈ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಹೊಟ್ಟೆ ಪಾಡಿಗೆ ಕೂಲಿ ಮತ್ತು ಇನ್ನಿತರೆ ಕೆಲಸಗಳಿಗೆ ಪ್ರತಿನಿತ್ಯ ಶಿವಮೊಗ್ಗಕ್ಕೆ ಓಡಾಡುವ ಜನರು ಬಸ್ ಸಿಗದೇ ಪರದಾಡುವಂತಾಗಿದೆ ಎಂದು ತಮ್ಮ ಆಳಲು ತೋಡಿಕೊಂಡರು.ಶಾಲಾ ಕಾಲೇಜಿಗೆ ಪ್ರತಿನಿತ್ಯ ಹೋಗಲು ಶಿವಮೊಗ್ಗವರೆಗೆ ಭಾರವಾದ ಪುಸ್ತಕದ ಚೀಲಗಳನ್ನು ಹೊತ್ತು ಕೊಂಡು ಹೋಗುವುದು ಅನಿವಾರ್ಯ ಒಂದು ಕಡೆಯಾದರೆ, ಬಹುತೇಕ ಬಸ್ ಗಳನ್ನು ಗೋವಿನ ಕೋವಿಯಲ್ಲಿ ನಿಲ್ಲಿಸದೇ ಹೋಗುತ್ತಿವೆ ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ವಾಹನ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಹೊನ್ನಾಳಿ ಕೆಎಸ್ಆರ್ ಟಿಸಿ ಬಸ್ ಡಿಪೋದಿಂದ ಟ್ರಾಪಿಕ್ ಇನ್ಸೆಪೆಕ್ಟರ್ ಗದ್ದಿಗೇಶ್, ಕಂಟ್ರೋಲರ್ ಲಕ್ಮಣ್, ಶಿವಮೊಗ್ಗ ವಿಭಾಗದ ದಿನೇಶ್ ಚನ್ನಗಿರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ಗ್ರಾಮಸ್ಥರು, ವಿದ್ಯಾರ್ಥಿಗಳ ಮನವಿ ಆಲಿಸಿದರು.ನಂತರ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ಆಂದರೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಓಡಾಡುವ ಸಂದರ್ಭದಲ್ಲಿ ಈ ಮಾರ್ಗದ ಬಸ್ ಗಳ ಸಂಖ್ಯೆಯಲ್ಲಿ ಹೆಚ್ಚಿಸಲಾಗುವುದು. ಇನ್ನು ನಾನ್ ಸ್ಟಾಪ್ (ತಡೆರಹಿತ) ಬಸ್ ಗಳಿಗೆ ನಿಲುಗಡೆ ಕೊಡುವ ಬಗ್ಗೆ ತಮ್ಮ ಸಂಸ್ಥೆ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳು ಭರವಸೆಯನ್ನು ಅಧಿಕಾರಿಗಳು ನೀಡಿದ್ದರ ಫಲವಾಗಿ ಪ್ರತಿಭಟನೆ ಹಿಂಪಡೆಯ ಲಾಯಿತು.
--ಫೋಟೋ: 6ಎಚ್.ಎಲ್.ಐ2.
ಹೊನ್ನಾಳಿ ಮೂಲಕ ಶಿವಮೊಗ್ಗದ ಕಡೆಗೆ ಓಡಾಡುವ ಕೆಎಸ್ಆರ್ ಟಿಸಿ ಬಸ್ ಗಳ ಸಂಖ್ಯೆ ಹೆಚ್ಚಿಸುವ ಆಗ್ರಹಿಸಿ ಗುರುವಾರ ಬೆಳಗ್ಗೆ ಗೋವಿನಕೋವಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ಗಳನ್ನು ತಡೆದು ಪ್ರತಿಭಟನೆ ಮಾಡಿದರು.