ಸಾರಾಂಶ
ಕನ್ನಡಪ್ರಭ ವಾರ್ತೆ, ಕುಣಿಗಲ್
ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಮಗುವಿನ ತಂದೆ, ತಾಯಿ ಸೇರಿ 5 ಮಂದಿಯನ್ನು ಬಂಧಿಸಿದ್ದು ಮಾರಾಟವಾಗಿದ್ದ ಮಗುವನ್ನು ರಕ್ಷಣೆ ಮಾಡಲಾಗಿದೆ.ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ತಂಡ ಜಂಟಿ ಕಾರ‍್ಯಾಚರಣೆ ನಡೆಸಿ ಮಗುವಿನ ತಾಯಿ ಮೋನಿಷಾ (21) ತಂದೆ ಶ್ರೀನಂದ (24) ಅಂಗನವಾಡಿ ಕಾರ್ಯಕರ್ತೆ ಜ್ಯೋತಿ (45) ಮಗು ಖರೀದಿದಾರ ಮುಬಾರಕ್ ಭಾಷಾ (36) ಮೋನಿಷಾ ಸಂಬಂಧಿ ಜ್ಯೋತಿ (32) ಎಂಬುವರನ್ನು ಬಂಧಿಸಲಾಗಿದೆ
ಘಟನೆ ವಿವರ : ರಾಮನಗರ ಜಿಲ್ಲೆ, ಮಾಗಡಿ ಮೂಲದ ಮೋನಿಷಾ ಹಾಗೂ ಶ್ರೀ ನಂದ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು , ಇವರ ಪ್ರೀತಿಯ ಫಲವಾಗಿ ಮೋನಿಷಾ ಗರ್ಭವತಿ ಆಗಿದ್ದರು. ಈ ವಿಚಾರವನ್ನು ಯಾರಿಗೂ ತಿಳಿಸದೆ ಗುಟ್ಟಾಗಿ ಇರಿಸಿದ್ದ ಗರ್ಭವತಿ ಮೋನಿಷಾ ಸಂಬಂಧಿ ಜ್ಯೋತಿ ಮೂಲಕ ಅಂಗನವಾಡಿಯ ಕಾರ್ಯಕರ್ತೆ ಜ್ಯೋತಿ ಎಂಬುವವರ ಸಹಕಾರದಿಂದ ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಫೆಬ್ರವರಿ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಗೆ ಮುನ್ನ ಜನಿಸಿದ ಮಗುವನ್ನು ಫೆಬ್ರವರಿ 22ರಂದು ಕೊತ್ತಕೆರೆ ಮೂಲದ ಮುಬಾರಕ್ ಪಾಷಾ ಎಂಬುವರಿಗೆ 60 ಸಾವಿರಕ್ಕೆ ಅಂಗನವಾಡಿ ಸಹಾಯಕಿ ಜ್ಯೋತಿ ಸಹಕಾರದಿಂದ ಮಾರಾಟ ಮಾಡಲಾಗಿತ್ತು. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಮೋನಿಷಾ ತನ್ನ ಮನೆಗೆ ತೆರಳಿದಾಗ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಣಿಗಲ್ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.ಆಸ್ಪತ್ರೆಯಲ್ಲಿ ಚಿಕಿತ್ಸೆಇನ್ನೂ 60 ಸಾವಿರಕ್ಕೆ ಮಾರಾಟವಾಗಿದ್ದ ನವಜಾತ ಶಿಶುವನ್ನು ರಕ್ಷಿಸಿ ತುಮಕೂರು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾದ ತಕ್ಷಣ ಅಧಿಕಾರಿಗಳು ಅಲ್ಲಿಗೆ ಹೋಗಿ ಮಗುವನ್ನು ರಕ್ಷಣೆ ಮಾಡಿ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಇದರಲ್ಲಿ ಭಾಗಿಯಾಗಿರುವು ಕಂಡುಬಂದಿದೆ. ಈಗಾಗಲೇ ಅವರನ್ನು ಗೌರವ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಲಾಗಿದೆ ಎಂದರು.