ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ಅಣ್ಣೇಹಳ್ಳಿ ಗ್ರಾಪಂ ಪಿಡಿಓ ಸವಿತಾ ಅವರ ಮೇಲೆ ನಡೆದಿರುವ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳ ನಿಂದನೆ ಖಂಡಿಸಿ ಕರ್ನಾಟಕ ರಾಜ್ಯ ಪಿಡಿಓಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಗುರುವಾರ ನಗರದ ಜಿಪಂ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಪಂ ಸಿಇಓ ಪ್ರವೀನ್ ಬಾಗೇವಾಡಿ ಹಾಗೂ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಜೂ.೨೦ರಂದು ಪಿಡಿಓ ಸವಿತಾ ಅಣ್ಣೇಹಳ್ಳಿ ಗ್ರಾಪಂ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ, ಗ್ರಾಪಂ ಮಾಜಿ ಸದಸ್ಯರಾದ ನಾಗರಾಜ್, ಮುನಿತಾಯಮ್ಮ ಹಾಗೂ ಇತರರು ಏಕಾಏಕಿ ಕಚೇರಿಗೆ ನುಗ್ಗಿ ಪಿಡಿಓ ಸವಿತಾ ಮೇಲೆ ಏಕವಚನದಲ್ಲಿ ತಿರುಗಿಬಿದ್ದು, ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ದೌರ್ಜನ್ಯದ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂ.೨೧ರಂದು ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ಪಿಡಿಓ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಗ್ರಾಮಸ್ಥರ ದೂರಿನ ಮೇರೆಗೆ ನಿಯಮಾನುಸಾರ ಕೋಳಿ ಫಾರಂ ಮಾಲಿನ್ಯದ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದಕ್ಕೆ ಹಾಗೂ ಶಾಲೆ ಹತ್ತಿರದ ಮರ ಕಟಾವು ಪ್ರಕರಣದಲ್ಲಿ ಅರಣ್ಯ ಇಲಾಖೆಗೆ ದೂರು ನೀಡಿದ್ದಕ್ಕೆ ದ್ವೇಷ ಸಾಧಿಸಲಾಗಿದೆ ಎಂದರು.
ಲೋಕಾಯುಕ್ತ ತನಿಖೆಯಲ್ಲೂ ಅಧಿಕಾರಿ ಕ್ಲೀನ್ ಶೀಟ್ ಪಡೆದಿದ್ದರೂ, ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದ್ದು, ಮಹಿಳಾ ಅಧಿಕಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ನೊಂದ ಅಧಿಕಾರಿ ಸವಿತಾ ಕಣ್ಣೀರು ಹಾಕುತ್ತಾ, ಕಚೇರಿಯಲ್ಲಿ ಅಡಾಕ್ ಸಭೆ ಹಾಗೂ ಬಿಲ್ ಸಿದ್ಧಪಡಿಸುವ ಕೆಲಸದಲ್ಲಿದ್ದಾಗ ಮಾಜಿ ಅಧ್ಯಕ್ಷ ನಾಗರಾಜ್ ಬಂದು ಏಕವಚನದಲ್ಲಿ ನಿಂದಿಸಲು ಆರಂಭಿಸಿದರು ಎಂದು ಹೇಳಿದರು.
ಪರಿಸ್ಥಿತಿ ರೆಕಾರ್ಡ್ ಮಾಡಲು ಫೋನ್ ಕ್ಯಾಮೆರಾ ಆನ್ ಮಾಡಿದಾಗ ಮತ್ತಷ್ಟು ಆಕ್ರೋಶಗೊಂಡು ಹಲ್ಲೆ ನಡೆಸಿ ಫೋನ್ ಕಸಿದುಕೊಂಡರು. ಕಳೆದ ಐದು ವರ್ಷದಿಂದ ಸಮಾಧಾನವಾಗಿ ಕೆಲಸ ಮಾಡಲು ಯತ್ನಿಸುತ್ತಿದ್ದರೂ ನಿರಂತರವಾಗಿ ಇಂತಹ ದೌರ್ಜನ್ಯಗಳು ನಡೆಯುತ್ತಿದ್ದು, ಇಂತಹ ಪ್ರಾಣಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಅಳಲನ್ನು ತೋಡಿಕೊಂಡರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಜಯ್ ಮಾತನಾಡಿ, ಪಿಡಿಒ ಸವಿತಾರ ಮೇಲೆ ನಡೆದಿರುವ ಹಲ್ಲೆ ಹಾಗೂ ನಿಂದನಾ ಘಟನೆ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ, ಘಟನೆ ನಡೆದು ಐದಾರು ದಿನಗಳಾಗಿ, ಎಫ್‌ಐಆರ್ ದಾಖಲಾಗಿದ್ದರೂ ಸಹ ಆರೋಪಿಯನ್ನು ಇದುವರೆಗೂ ಬಂಧಿಸದೇ ಇರುವುದು ತೀವ್ರ ಆತಂಕ ಮೂಡಿಸಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್, ಘಟನೆ ಗಮನಕ್ಕೆ ಬಂದ ತಕ್ಷಣವೇ ಸಿಇಓ ಕೋಲಾರ ಎಸ್‌ಪಿರೊಂದಿಗೆ ಮಾತನಾಡಿದ್ದಾರೆ, ಅಧಿಕಾರಿಗಳು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡಲು ವಾತಾವರಣ ಕಲ್ಪಿಸಿಕೊಡಲಾಗುವುದು ಇಲಾಖಾ ಸಚಿವರ ಗಮನಕ್ಕೆ ತಂದು ಕಾನೂನು ರೀತ್ಯಾ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಎನ್.ದೀಪ ಮಹದೇವ್, ಜಿಲ್ಲಾ ಖಜಾಂಚಿ ಎನ್.ಸಂಪರಾಜ, ಗೌರವಾಧ್ಯಕ್ಷರಾದ ಕಾಶೀನಾಥ್, ರಾಮಕೃಷ್ಣ.ಎಂ, ಮಂಗಳಾಂಬ, ಮಧುಚಂದ್ರ, ನಾಗರಾಜ್, ಭವಾನಿ, ರಮೇಶ್ ಇದ್ದರು.