ಕನ್ನಡಪ್ರಭ ವಾರ್ತೆ, ತುಮಕೂರುಸಾಹಿತ್ಯ ಎಂಬುದು ಕತ್ತಲಲ್ಲಿ ಅಡಗಿರುವ ಸಂಪತ್ತು. ಅದನ್ನು ಬರವಣಿಗೆ ಎಂಬ ದೀಪದ ಬೆಳಕನ್ನು ಹಚ್ಚಿ ಹೊರಗೆ ತರಬೇಕು. ಬರವಣಿಗೆಯನ್ನು ಆರಂಭಿಸಲು ಯಾರೂ ಹಿಂಜರಿಯಬಾರದು ಎಂದು ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠದ ವತಿಯಿಂದ ಗುರುವಾರದಂದು ಆಯೋಜಿಸಿದ್ದ ಮಗಳು ಕಂಡಂತೆ ಕುವೆಂಪು ಎಂಬ ಶೀರ್ಷಿಕೆಯ ಆಪ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗಳು ಕಂಡಂತೆ ಕುವೆಂಪು ಪುಸ್ತಕ ಬರೆಯುವಾಗ ಮೊದಲು ಭಯವಿತ್ತು. ಆದರೆ ಬರೆಯಲು ಆರಂಭಿಸಿದ ಮೇಲೆ ಅದು ಮುಗಿಯುವವರೆಗೂ ತಿಳಿಯಲೇ ಇಲ್ಲ. ಕುವೆಂಪು ಅವರು ಮನೆಯಲ್ಲಿ ಎಲ್ಲರಂತೆ ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಇಷ್ಟಗಳಿಗೆ ಕುವೆಂಪು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಮಕ್ಕಳು ಏನನ್ನು ಸಾಧಿಸಬೇಕೆಂದುಕೊಳ್ಳುತ್ತಾರೋ ಅದಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೆಂಕಟೇಶ್ವರಲು ಎಂ. ಮಾತನಾಡಿ ಉತ್ತಮವಾದ ದೂರದೃಷ್ಟಿ ಹಾಗೂ ಗುರಿಯನ್ನಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ. ಅಂದಿನ ಕುಲಪತಿಗಳಾಗಿದ್ದ ಚಿದಾನಂದ ಗೌಡರು ಹಾಗೂ ಅವರಿಗೆ ಬೆಂಬಲ ನೀಡಿದ ಕುಲಸಚಿವ ಪ್ರವೀಣ್ ಚಂದ್ರಪಾಂಡೆ ಅವರು ಕೇವಲ ನಾಲ್ಕು ವರ್ಷಗಳಲ್ಲಿ ಕುವೆಂಪು ವಿವಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದರು. ಸಾರಿಗೆ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿ, ಇಂದು ಆ ವಿಶ್ವವಿದ್ಯಾನಿಲಯವು ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿ ನಿಲ್ಲುವಂತೆ ಮಾಡಿದ್ದಾರೆ. ಕುವೆಂಪು ವಿವಿಯ ಮಾದರಿಯಲ್ಲೇ ತುಮಕೂರು ವಿಶ್ವವಿದ್ಯಾನಿಲಯವೂ ಅಭಿವೃದ್ಧಿಯಾಗಬೇಕು ಎಂಬುದು ನಮ್ಮೆಲ್ಲರ ಗುರಿಯಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ಮುಂದೆ ಸಾಗಲಿದ್ದೇವೆ ಎಂದು ತಿಳಿಸಿದರು. ಕುವೆಂಪು ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ಗೀತಾ ವಸಂತ ಅವರು ಆಶಯ ನುಡಿಗಳನ್ನಾಡಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಚಿದಾನಂದಗೌಡ ಉಪಸ್ಥಿತರಿದ್ದರು.