ದಲಿತ ಕಾಲೋನಿಗಳಲ್ಲೇ ನೇರವಾಗಿ ಜನಸಂಪರ್ಕ ಸಭೆ

| Published : Sep 01 2024, 01:49 AM IST

ದಲಿತ ಕಾಲೋನಿಗಳಲ್ಲೇ ನೇರವಾಗಿ ಜನಸಂಪರ್ಕ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಜಾಗೃತಿ ಸಮಾವೇಶವನ್ನು ದಲಿತ ಸಂಘಟನೆಗಳು ಇನ್ನು ಮುಂದೆ ಸಮಸ್ಯೆಗಳ ಗೂಡಾಗಿರುವ ಶೋಷಿತರ ಕಾಲೋನಿಗಳಲ್ಲೇ ಆಯೋಜಿಸಲಿ.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನಲ್ಲಿ ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ದಲಿತ ಕಾಲೋನಿಗಳಲ್ಲೇ ನೇರವಾಗಿ ಜನಸಂಪರ್ಕ ಸಭೆ ನಡೆಸಲು ತೀರ್ಮಾನಿಸಿದ್ದೇನೆ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ದಸಂಸ ವತಿಯಿಂದ ಡಿ. ದೇವರಾಜ ಅರಸು 109ನೇ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹುಣಸೂರು ತಾಲೂಕು ಒಂದು ಮಿನಿಭಾರತವಿದ್ದಂತೆ, ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅಧಿಕಾರಾವಧಿಯಲ್ಲಿ ತಾಲೂಕಿಗೆ ಬೇರಡೆಯಿಂದ ಬಂದ ವಿವಿಧ ಜಾತಿ, ಭಾಷೆ, ಜನಾಂಗದ ಜನರಿಗೆ ಆಶ್ರಯ ಮತ್ತು ರಕ್ಷಣೆ ನೀಡಿದರು. ಆದರೆ ಅವರು ವಾಸಿಸುತ್ತಿರುವ ಕಾಲೋನಿಗಳು, ಗ್ರಾಮಗಳಲ್ಲಿ ಇಂದಿಗೂ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಇಂದಿನ ಜಾಗೃತಿ ಸಮಾವೇಶವನ್ನು ದಲಿತ ಸಂಘಟನೆಗಳು ಇನ್ನು ಮುಂದೆ ಸಮಸ್ಯೆಗಳ ಗೂಡಾಗಿರುವ ಶೋಷಿತರ ಕಾಲೋನಿಗಳಲ್ಲೇ ಆಯೋಜಿಸಲಿ. ನಾನು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅಲ್ಲಿಗೆ ಬಂದು ನೇರವಾಗಿ ಜನರೊಂದಿಗೆ ಬೆರೆತು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇನೆ ಎಂದರು.

ಸರ್ಕಾರ ಅನುದಾನ ನೀಡುವಲ್ಲಿ ವಿಫಲವಾಗಿದೆ

ಗ್ಯಾರಂಟಿ ಯೋಜನೆಗಳ ಹೊಡೆತದ ನಡುವೆ ಸರ್ಕಾರ ಅನುದಾನ ನೀಡುವಲ್ಲಿ ವಿಫಲವಾಗಿದೆ. ಇದು ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಹಣೆಬರಹವೂ ಇದೇ ಆಗಿದೆ. ಈ ನಡುವೆಯೇ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಂಪರ್ಕ ಸಾಧಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿದ್ದ 10 ಕೋಟಿ ರು. ಹೆಚ್ಚುವರಿ ಅನುದಾನ ಸರ್ಕಾರದಿಂದ ದೊರಕಿದೆ. ಅರಸು ಭವನಕ್ಕೆ ಅಗತ್ಯ 2 ಕೋಟಿ ರು. ಗಳ ಅನುದಾನ ಮಂಜೂರಾಗಿದೆ. ಗಾವಡಗೆರ ಹೋಬಳಿ ಶಿರಿಯೂರು, ಹುಸೇನ್‌ ಪುರ ನಾಲೆಗಳ ಅಭಿವೃದ್ಧಿಗಾಗಿ 3 ಕೋಟಿ ರು. ಗಳ ಅನುದಾನ ಮಂಜೂರಾಗಿದೆ. ಅರಸು ಹುಟ್ಟೂರು ಕಲ್ಲಹಳ್ಳಿಯ ಅವರ ಮನೆಯ ಸ್ಮಾರಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದ್ದು, ಜನಪ್ರತಿನಿಧಿಗಳೆಲ್ಲರೂ ಕೂಡಿ ಅನುದಾನ ನೀಡಲಿದ್ದೇವೆ ಎಂದರು.

ರಾಜಕಾರಣಿಗಳಲ್ಲೇ ಅಪರೂಪದ ರಾಜಕಾರಣಿ

ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ದೇವರಾಜ ಅರಸು ರಾಜಕಾರಣಿಗಳಲ್ಲೇ ಅಪರೂಪದ ರಾಜಕಾರಣಿ. ತಾವು ಜಾರಿಗೆ ತಂದ ಕಾನೂನುಗಳನ್ನು ಮೊದಲು ತಮ್ಮ ಮನೆಯಿಂದಲೇ ಜಾರಿಗೊಳಿಸಿದ ಧೀಮಂತ ನಾಯಕ. ಅರಸು ಅವರು ತಾಲೂಕಿನ ಶಾಂತಿಯ ನೆಲೆಯನ್ನಾಗಿಸಿದ್ದರು. ಅದರಂತೆ ಇಂದು ಹರೀಶ್‌ ಗೌಡರ ಅಧಿಕಾರಾವಧಿಯಲ್ಲಿ ಗ್ರಾಮಗಳಲ್ಲ ಶಾಂತಿ, ಸೌಹಾರ್ದತೆ ನೆಲೆಸಿದೆ. ಶೋಷಿತ ಸಮಾಜಗಳ ಬೇಡಿಕೆಯನ್ನು ಈಡೇರಿಸುವತ್ತ ಶಾಸಕರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಮುಖಂಡರಾದ ಫಜಲ್ ಅಹಮದ್, ಗಣೇಶ್, ಕುಮಾರಸ್ವಾಮಿ, ರಮೇಶ್, ವಿ.ಪಿ. ಸಾಯಿನಾಥ್, ವಿ. ಗಣೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು.

ನಗರಸಭಾ ಸದಸ್ಯರಾದ ಹರೀಶ್‌ ಕುಮಾರ್, ರಾಣಿ ಪೆರುಮಾಳ್, ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ರಾಜಶೇಖರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗಣ್ಣ, ಕೆಂಪರಾಜು, ದೇವೇಂದ್ರ, ಗಜೇಂದ್ರ, ಚಿಲ್ಕುಂದ ವೇಣುಗೋಪಾಲ್ ಇದ್ದರು.

ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಹರೀಶ್‌ ಗೌಡರಿಗೆ ಮನವಿ ಸಲ್ಲಿಸಲಾಯಿತು.