ಕಾಂಗ್ರೆಸಿಗರು ಮುಡಾ ಚಲೋ ನಡೆಸಿ ಕ್ಷಮೆ ಕೇಳಲಿ: ಜೋಶಿ

| Published : Sep 01 2024, 01:49 AM IST

ಕಾಂಗ್ರೆಸಿಗರು ಮುಡಾ ಚಲೋ ನಡೆಸಿ ಕ್ಷಮೆ ಕೇಳಲಿ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ನಾಯಕರು ರಾಜಭವನ ಚಲೋ ಮಾಡುವುದನ್ನು ಬಿಟ್ಟು ಮೈಸೂರಿಗೆ ತೆರಳಿ ಮುಡಾ ಚಲೋ ನಡೆಸಿ ನಮ್ಮಿಂದ ತಪ್ಪಾಗಿದೆ ಎಂದು ಮುಡಾ ಬಳಿ ಕ್ಷಮೆ ಕೇಳಲಿ. ಅದನ್ನು ಬಿಟ್ಟು ಈ ರೀತಿಯ ನಾಟಕ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುದ್ಧಿಮಾತು ಹೇಳಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್‌ನವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಿ ಕ್ಷಮೆ ಕೇಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ಸಿನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಬೇಕು. ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಕೈ ಮುಗಿದು ಕ್ಷಮೆ ಕೇಳಿ ಬರಲಿ ಎಂದು ಹೇಳಿದರು.

ತನಿಖೆಗೇಕೆ ಹೆದರಿಕೆ?

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೇಕೆ ಹೆದರುತ್ತಾರೆ? ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಯಡಿಯೂರಪ್ಪ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದರಾ? ಎಂದು ಜೋಶಿ ಪ್ರಶ್ನಿಸಿದರು.

ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಯಡಿಯೂರಪ್ಪ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.

ತಪ್ಪು ಮಾಡಿಲ್ಲ ಎಂದಾದರೆ ರಾಜಭವನ ಚಲೋ ಏಕೆ? ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ ಎಂದರು.

ರಾಜ್ಯಪಾಲರೂ ದಲಿತರೇ:

ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವನು ಎರಡು ಬಾರಿ ಸಿಎಂ ಆದ ಕಾರಣಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ರಾಜ್ಯಪಾಲರು ದಲಿತರೇ, ಅತ್ಯಂತ ಹಿಂದುಳಿದ ವರ್ಗದಿಂದ ಬಂದವರೇ ಆಗಿದ್ದಾರೆ. ಆಗ ಅವರನ್ನು ಹೊಗಳುತ್ತಿದ್ದ ಸಿಎಂ, ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರನ್ನು ಬೆದರಿಸುವುದೇಕೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಹೈಡ್ರಾಮಾ ಬಿಟ್ಟು ತನಿಖೆ ಎದುರಿಸಲಿ. ನ್ಯಾಯಾಂಗವಿದೆ. ತಾವು ಶುದ್ಧರು ಹೌದೋ... ಅಲ್ಲವೋ... ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಜನಕಲ್ಯಾಣಕ್ಕೆ ಮುಂದಾಗದೆ ರಾಜಕೀಯ ಡೊಂಬರಾಟದಲ್ಲಿ ತೊಡಗಿದೆ. ಸಿಎಂ, ಡಿಸಿಎಂ ಜನಕಲ್ಯಾಣ, ಜನರ ಹಿತ, ಅಭಿವೃದ್ಧಿಗೆ ಬದ್ಧತೆ ತೋರದೆ ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ಡೊಂಬರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲವೆಂದು ಆರೋಪಿಸಿದರು.

ಕೇಂದ್ರ ಸರ್ಕಾರ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್ ಅನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತ್ವರಿತ ಅನುಮತಿ ನೀಡಿದರೂ ರಾಜ್ಯದಲ್ಲಿ ಸೂಕ್ತ ತಯಾರಿಯನ್ನೇ ಮಾಡಿಕೊಳ್ಳಲಾಗಿಲ್ಲ ಎಂದ ಅವರು, ರಾಜ್ಯದಲ್ಲಿ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಕನಿಷ್ಠ ರಸ್ತೆಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ ಎಂದು ಆರೋಪಿಸಿದರು.

ಎನ್‌ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ ಓಡೋಡಿ ಹೋಗುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ನೋಡಲಿ. ಆಡಳಿತ, ಅಭಿವೃದ್ಧಿ ಏನಾಗಿದೆ? ಎಂಬುದನ್ನು ಎಂದರು.