ಗೋಡೆ ಬರಹದ ಮೂಲಕ ರಾಣಿಬೆನ್ನೂರಿನಲ್ಲಿ ಸ್ವಚ್ಛತೆಯ ಅರಿವು

| Published : Dec 01 2024, 01:34 AM IST

ಸಾರಾಂಶ

ರಾಣಿಬೆನ್ನೂರು ನಗರದಲ್ಲಿ ಗೋಡೆ ಬರಹ ಹಾಗೂ ಚಿತ್ರಗಳ ಮೂಲಕ ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ಥಳೀಯ ನಗರಸಭೆ ಮುಂದಾಗಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದಲ್ಲಿ ಗೋಡೆ ಬರಹ ಹಾಗೂ ಚಿತ್ರಗಳ ಮೂಲಕ ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ಥಳೀಯ ನಗರಸಭೆ ಮುಂದಾಗಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂವಹನಕ್ಕಾಗಿ (ಐಇಸಿ) ವಿಶೇಷ ಅನುದಾನ ತೆಗೆದಿರಿಸಲಾಗಿರುತ್ತದೆ. ಅದರಂತೆ ಸ್ಥಳೀಯ ನಗರಸಭೆ ಬಜೆಟ್‌ನಲ್ಲಿ ಇದಕ್ಕಾಗಿ ವಾರ್ಷಿಕ ₹15 ಲಕ್ಷ ಅನುದಾನ ಮೀಸಲಿಡಲಾಗಿದೆ. ಇತ್ತೀಚಿಗೆ ನಗರಸಭೆ ಅಧಿಕಾರಿಗಳು ಈ ಅನುದಾನವನ್ನು ಬಳಸಿಕೊಂಡು ಪ್ರಾರಂಭಿಕ ಹಂತದಲ್ಲಿ ನಗರದ ಕೆಇಬಿ ವಿನಾಯಕ ದೇವಸ್ಥಾನ, ಬಸ್‌ ನಿಲ್ದಾಣ ಪಕ್ಕದಲ್ಲಿ, ತಾಲೂಕು ಪಂಚಾಯತ್ ಕಚೇರಿ ಮುಂತಾದ ಕಡೆಗಳಲ್ಲಿ ವಿವಿಧ ವರ್ಣಗಳಲ್ಲಿ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ.

ಚಿತ್ರಗಳಲ್ಲಿ ಏನಿದೆ?

ಗೋಡೆಗಳಲ್ಲಿ ಬಿಡಿಸಲಾಗಿರುವ ಚಿತ್ರಗಳಲ್ಲಿ ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ಕ್ರಮಗಳು, ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಅನಾಹುತಗಳ ಕುರಿತು ಮಾಹಿತಿ, ಪರಿಸರ ಸಂರಕ್ಷಣೆಗಾಗಿ ಗಿಡ-ಮರಗಳನ್ನು ಬೆಳೆಸುವುದು ಮುಂತಾದ ಅಂಶಗಳಿಗೆ ಒತ್ತು ನೀಡಲಾಗಿದೆ.

ಸ್ವಚ್ಛತೆಗೆ ಕಟ್ಟು ನಿಟ್ಟಿನ ಕ್ರಮ:

ಪ್ರತಿಯೊಂದು ವಾರ್ಡ್‌ನಲ್ಲಿಯೂ ನಗರಸಭೆಯ ಕಸ ವಿಲೇವಾರಿ ವಾಹನಗಳ ಮೂಲಕ ಮನೆ, ಅಂಗಡಿಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೇ ನಗರಸಭೆ ವತಿಯಿಂದ ಬೇಕಾಬಿಟ್ಟಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚಿಗೆ ಸ್ವಚ್ಛತಾ ಕ್ರಮ ಅನುಸರಿಸದ ಹೋಟೆಲ್‌ಗೆ ಬೀಗ ಜಡಿದು ಬಂದ್ ಮಾಡಲಾಗಿತ್ತು.

ನಮ್ಮ ನಗರ ನಮ್ಮ ಹೆಮ್ಮೆ: ನಗರದ ಪ್ರತಿಯೊಬ್ಬ ನಿವಾಸಿಯಲ್ಲಿಯೂ ನಮ್ಮ ನಗರ ನಮ್ಮ ಹೆಮ್ಮೆ ಎಂಬ ಅಭಿಮಾನ ಹೊಂದಿರಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸ್ವಚ್ಛವಾಗಿರಿಸಿರುವ ರೀತಿಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಲು ನಗರಸಭೆ ಹಾಗೂ ಸದಸ್ಯರ ಜತೆ ಕೈ ಜೋಡಿಸುವ ಮೂಲಕ ನಗರದ ಸೌಂದರ್ಯಕ್ಕೆ ಪ್ರಾಶಸ್ತ್ಯ ನೀಡುವಂತಾಗಬೇಕು ಎಂಬುದು ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಆಶಯವಾಗಿದೆ. ನಗರಸಭೆ ವತಿಯಿಂದ ನಗರದ ಕೆಲ ಭಾಗಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗೋಡೆ ಬರಹಗಳನ್ನು ಬರೆಯಿಸಿರುವುದು ಒಂದು ಉತ್ತಮ ಪ್ರಯತ್ನವಾಗಿದೆ ಎಂದು ರಾಣಿಬೆನ್ನೂರಿನ ಜಗದೀಶ ಅಂಕಲಕೋಟಿ ಹೇಳಿದರು.

ಗೋಡೆ ಬರಹಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಸರ್ಕಾರಿ ಕಚೇರಿಗಳ ಕೌಂಪಾಂಡ್‌ಗಳ ಮೇಲೆ ಇದೇ ರೀತಿ ಗೋಡೆ ಬರಹಗಳನ್ನು ಬರೆಯಿಸಲಾಗುವುದು ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.