ಅಮೃತ ಪುರುಷರ ಸನ್ಮಾನ: ಪಾಲಿಕೆಗೆ ಎಸ್ಸೆಸ್ಸೆಂ ಶ್ಲಾಘನೆ

| Published : Dec 01 2024, 01:34 AM IST

ಸಾರಾಂಶ

ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಪಕ್ಷಾತೀತವಾಗಿ ಅಮೃತ ಪುರುಷರಿಗೆ ಪೌರ ನಾಗರೀಕ ಸನ್ಮಾನ ಮಾಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆ ಮಾದರಿ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶ್ಲಾಘಿಸಿದ್ದಾರೆ.

- ಆಸೆ, ಆಮಿಷಕ್ಕೆ ಒಳಗಾಗದೇ ರವೀಂದ್ರನಾಥ್‌ ಬಿಜೆಪಿ ಸಂಘಟನೆಗೆ ದುಡಿದವರು - ಎಸ್‌ಎಸ್‌, ನರಸಿಂಹಪ್ಪ, ಡಾ.ಎಲಿ, ವಿರೂಪಾಕ್ಷಪ್ಪ, ಇಮಾಂ ಸನ್ಮಾನಕ್ಕೆ ಹರ್ಷ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಪಕ್ಷಾತೀತವಾಗಿ ಅಮೃತ ಪುರುಷರಿಗೆ ಪೌರ ನಾಗರೀಕ ಸನ್ಮಾನ ಮಾಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆ ಮಾದರಿ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶ್ಲಾಘಿಸಿದರು.

ನಗರದ ಪಾಲಿಕೆ ಆವರಣದಲ್ಲಿ ಶನಿವಾರ ರಾಜ್ಯೋತ್ಸವ ಸಮಾರಂಭದಲ್ಲಿ ಅಮೃತ ಪುರುಷರಿಗೆ ನಾಗರೀಕ ಪೌರ ಸನ್ಮಾನದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಚನ್ನಗಿರಿ ವಿರೂಪಾಕ್ಷಪ್ಪ, ಡಾ. ಎಸ್.ಎಂ.ಎಲಿ, ಕೆ.ಇಮಾಂ ಮೇಷ್ಟ್ರು ಅವರಿಗೆ ಗೌರವಿಸಿ ಅವರು ಮಾತನಾಡಿದರು.

ಹಿರಿಯರು, ಕಲಾ ತಂಡಗಳು, ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಇಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಂದ ಹಿರಿಯರವರೆಗೆ ಸಾಧನೆ ಗುರುತಿಸಿ, 120ರಿಂದ 180 ಸಾಧಕರಿಗೆ ಸನ್ಮಾನಿಸುವ ಕೆಲಸವಾಗಿದೆ. ದಾವಣಗೆರೆ ಜಿಲ್ಲೆ, ರಾಜ್ಯಕ್ಕೋಸ್ಕರ ಹೋರಾಟ ಮಾಡಿದವರಿಗೆ ಸನ್ಮಾನ ಮಾಡುವ ಕೆಲಸ ಆಗಬೇಕು. ಸಾಧಕರನ್ನು ಗುರುತಿಸಿ, ಸನ್ಮಾನಿಸುವ, ಅಮೃತ ಪುರುಷರಿಗೆ ಸನ್ಮಾನಿಸಲಾಗಿದೆ. ಮೇಯರ್‌ ಕೆ.ಚಮನ್ ಸಾಬ್, ಉಪ ಮೇಯರ್‌ ಶಾಂತಕುಮಾರ ಸೋಗಿ, ಆಯುಕ್ತರು, ಸದಸ್ಯರ ಎಲ್ಲರೂ ಉತ್ತಮ ಸಂಪ್ರದಾಯ ಶುರು ಮಾಡಿದ್ದೀರಿ ಎಂದು ಶ್ಲಾಘಿಸಿದರು.

ನಾಗರೀಕ ಪೌರ ಸನ್ಮಾನಕ್ಕೆ ರೈತ ನಾಯಕರಾದ, ಭದ್ರಾ ನೀರಿಗಾಗಿ ಹೋರಾಟ ನಡೆಸಿಕೊಂಡು ಬಂದ ಪ್ರೊ. ಸಿ.ನರಸಿಂಹಪ್ಪ, ಬಿಜೆಪಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ಸಹ ಬರಬೇಕಾಗಿತ್ತು. ಇಬ್ಬರೂ ಕಾರಣಾಂತರದಿಂದ ಬಂದಿಲ್ಲ. ನಗರ, ಜಿಲ್ಲೆಗಾಗಿ ಶ್ರಮಿಸಿದ ಹಿರಿಯರ ಸನ್ಮಾನ ಉತ್ತಮ ಕೆಲಸ. ನಗರ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ರವೀಂದ್ರನಾಥರ ಕೊಡುಗೆ ಇದೆ. ರವೀಂದ್ರನಾಥ ಯಾವುದೇ ‍ಆಸೆ, ಆಮಿಷಕ್ಕೊಳಗಾಗದೇ, ಒಳ್ಳೆಯ ರಾಜಕಾರಣ ಮಾಡಿದವರು. ಪಕ್ಷಬೇಧ, ತಾರತಮ್ಯ ಇಲ್ಲದೇ ಎಲ್ಲರಿಗೂ ಸನ್ಮಾನಿಸಿದ್ದು ಖುಷಿ ತಂದಿದೆ ಎಂದರು.

ರೈತರಿಗಾಗಿ ನರಸಿಂಹಪ್ಪ ಕೆಲಸ ಮಾಡಿದ್ದಾರೆ. ಚನ್ನಗಿರಿ ವಿರೂಪಾಕ್ಷಪ್ಪ ದೊಡ್ಡ ಮನೆತನದ ಮುತ್ಸದ್ದಿ. ಇಮಾಂ ಮೇಷ್ಟ್ರು ಶಿಷ್ಯಂದಿರು ದಾವಣಗೆರೆ ಗಲ್ಲಿಯಲ್ಲಿ ಒಬ್ಬರಾದರೂ ಸಿಗುತ್ತಾರೆ. ಡಾ. ಎಸ್.ಎಂ. ಎಲಿ ಅತ್ಯುತ್ತಮ ವೈದ್ಯರಷ್ಟೇ ಅಲ್ಲ, ರೋಗಿಗಳು ತಿಳಿದಷ್ಟು ಡಬ್ಬಿಗೆ ಹಾಕಬೇಕು. ಯಾರಾದರೂ ಹಣ ಇಲ್ಲವೆಂದರೆ, ಡಬ್ಬಿ ತೆಗೆದು, ಅದರಲ್ಲಿ ಎಷ್ಟು ಬೇಕೋ ಅಷ್ಟು ಹಣ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದ ವೈದ್ಯರು. ಇಂತಹ ಅಮೃತ ಪುರುಷರಿಗೆ ಸನ್ಮಾನಿಸುವ ಮೂಲಕ ಪಾಲಿಕೆ ತನ್ನ ಹಿರಿಮೆ, ಗರಿಮೆ ಹೆಚ್ಚಿಸಿಕೊಂಡಿದೆ ಎಂದು ಸಚಿವರು ಮೆಚ್ಚುಗೆ ಸೂಚಿಸಿದರು.

ದಾವಣಗೆರೆ ನಗರದ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪನವರೂ ಶ್ರಮಿಸಿದ್ದಾರೆ. ಪಂಪಾಪತಿಯವರು ಇಲ್ಲ, ಅಂತಹವರೂ ನೆನಪಾಗಿದ್ದರು. ಈ ಎಲ್ಲ ಅಮೃತ ಪುರುಷರಿಗೂ ದೇವರು ಆಯುರೋಗ್ಯ, ನೀಡಲಿ. ನೂರು ವರ್ಷದ ಬಾಳಿ, ಎಲ್ಲರಿಗೂ ಮಾರ್ಗದರ್ಶಕರಾಗಿ, ಕಿವಿ ಹಿಂಡುವ ಮೂಲಕ ಸರಿದಾರಿ ತೋರಲಿ ಎಂದು ಮಲ್ಲಿಕಾರ್ಜುನ ಶುಭಾರೈಸಿದರು.

- - -

ಟಾಪ್‌ ಕೋಟ್‌ ದಾವಣಗೆರೆಗೆ ನನಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಮುತ್ಸದ್ದಿಗಳ ಭೇಟಿ ಮಾಡಿ, ಆಶೀರ್ವಾದ ಇಲ್ಲಿ ಪಡೆದೆ. ಸಾಮಾನ್ಯವಾಗಿ ಎಲ್ಲ ಕಡೆ ನಾಯಕರಷ್ಟೇ ಇರುತ್ತಾರೆ. ಇಲ್ಲಿ ನಾಯಕಿಯರನ್ನೂ ನೋಡಿ, ಖುಷಿಯಾಯಿತು. ಮಹಿಳೆಯರ ಪ್ರಾತಿನಿಧ್ಯ ಇಲ್ಲಿದೆ. ದಾವಣಗೆರೆಯಲ್ಲಿ ಸಿನಿಮಾ ಸಾಹಿತ್ಯ ಸಂಭ್ರಮಿಸುವ ಜನ. ಸಿನಿಮಾ ಬಿಡುಗಡೆಯಾದಾಗ ದಾವಣಗೆರೆ ಕಲೆಕ್ಷನ್ ಚನ್ನಾಗಿದೆಯೆಂದರೆ ಸಿನಿಮಾ ಯಶಸ್ವಿ ಅಂತಾ ಅರ್ಥ. ಹೆಡ್ ಬುಷ್ ಸಿನಿಮಾ ವಿಚಾರದಲ್ಲೂ ಇದು ಸಾಬೀತಾಯಿತು

- ಡಾಲಿ ಧನಂಜಯ, ನಾಯಕ ನಟ