25ರಿಂದ ಅಯ್ಯಪ್ಪಸ್ವಾಮಿ ದೇವಾಲಯದ ರಜತ ಮಹೋತ್ಸವ

| Published : Dec 21 2024, 01:16 AM IST

ಸಾರಾಂಶ

ಡಿ. ೨೫ ಮತ್ತು ೨೬ರಂದು ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಲಿವೆ. ಡಿ. ೨೬ರಂದು ಸಂಜೆ ಕಲ್ಮೇಶ್ವರ ದೇವಾಲಯದಿಂದ ಪಲ್ಲಕ್ಕಿ ಉತ್ಸವ ಹೊರಟು ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸಲಿದೆ.

ಮುಂಡಗೋಡ: ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ, ರಜತ ಮಹೋತ್ಸವ ಮತ್ತು ಲಕ್ಷ ದೀಪೋತ್ಸವ ಡಿ. ೨೫ರಿಂದ ೨೮ರ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ೨೦ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಯ್ಯಪ್ಪ ಸ್ವಾಮಿ ದೇವಾಲಯ ವಿಶ್ವಸ್ಥ ಸಮಿತಿ ಅಧ್ಯಕ್ಷ ವಿನಾಯಕ ರಾಯ್ಕರ ತಿಳಿಸಿದರು.ಶುಕ್ರವಾರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರತಿಷ್ಠಾಪನೆಗೊಂಡು ೨೫ ವರ್ಷ ಪೂರೈಸಿದ ಹಿನ್ನೆಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಯಾವುದೇ ಜಾತಿ, ಧರ್ಮ, ಬಡವ- ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲ ಭಕ್ತಾದಿಗಳ ಶ್ರಮದ ಫಲವಾಗಿ ಈ ದೇವಾಲಯ ಈ ಹಂತಕ್ಕೆ ತಲುಪಿದೆ ಎಂದರು. ಡಿ. ೨೫ ಮತ್ತು ೨೬ರಂದು ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಲಿವೆ. ಡಿ. ೨೬ರಂದು ಸಂಜೆ ಕಲ್ಮೇಶ್ವರ ದೇವಾಲಯದಿಂದ ಪಲ್ಲಕ್ಕಿ ಉತ್ಸವ ಹೊರಟು ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸಲಿದೆ. ಡಿ. ೨೭ರಂದು ಬೆಳಗ್ಗೆ ೧೦.೩೦ಕ್ಕೆ ಹೊನ್ನಾವರ ತಾಲೂಕು ಕರ್ಕಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಆಗಮಿಸಲಿದ್ದು, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸುವರು. ಸಂಜೆ ೭ ಗಂಟೆಗೆ ಆಶೀರ್ವಚನ ನೀಡಲಿದ್ದಾರೆ. ಡಿ. ೨೮ರಂದು ಸಂಜೆ ೬.೩೦ಕ್ಕೆ ಮಹಾಮಂಡಲ ಪೂಜೆ ದೀಪಾರಾಧನ ಪೂಜೆ, ಲಕ್ಷದೀಪೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಹನ್ಮಂತಪ್ಪ ಭಜಂತ್ರಿ, ನಾಗಭೂಷಣ ಹಾವಣಗಿ, ನಾಗರಾಜ ಕುನ್ನೂರ, ಮೈಲಾರಿ ದೇವರಮನಿ, ಸಂಪತ್ ಕ್ಯಾಮನಕೇರಿ ಮುಂತಾದವರು ಉಪಸ್ಥಿತರಿದ್ದರು.

೨೨ರಂದು ಸಂವಾದ ಪಂಚಕ ತಾಳಮದ್ದಲೆ ಕಮ್ಮಟ

ಯಲ್ಲಾಪುರ: ತಾಲೂಕಿನ ಆನಗೋಡ ಸಮೀಪದ ಹಸರಪಾಲಿನ ಯಕ್ಷ ಸಂಸ್ಕೃತಿ ಪರಿವಾರದ ಆವಾರದಲ್ಲಿ ಡಿ. ೨೨ರಂದು ಸಂವಾದ ಪಂಚಕ ಎಂಬ ವಿನೂತನ ತಾಳಮದ್ದಲೆ ಕಮ್ಮಟ ನಡೆಯಲಿದೆ.ಬೆಳಗ್ಗೆ ೯.೩೦ರಿಂದ ಸಂಜೆ ೫ರ ವರೆಗೆ ನಡೆಯಲಿರುವ ಕಮ್ಮಟದಲ್ಲಿ ತಾಲೂಕಿನ ಹವ್ಯಾಸಿ ಕಲಾವಿದರು ಭಾಗವಹಿಸಲಿದ್ದಾರೆ. ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ, ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ ಅವರ ನೇತೃತ್ವದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ ಹಾಗೂ ಪ್ರೇರಣಾ ಸಂಸ್ಥೆ ಗುಂದ ಇವರ ಸಹಯೋಗದೊಂದಿಗೆ ಕಮ್ಮಟ ಆಯೋಜಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ, ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ ಭಾಗವಹಿಸಲಿದ್ದಾರೆ. ಇಡೀ ದಿನದ ಕಾರ್ಯಕ್ರಮ ಅವಲೋಕನಕಾರರಾಗಿ ಡಾ. ಮಹೇಶ ಭಟ್ಟ ಇಡಗುಂದಿ ಪಾಲ್ಗೊಳ್ಳಲಿದ್ದಾರೆ.

ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ತಾಲೂಕಿನ ವಿವಿಧೆಡೆಯ ಕಲಾವಿದರು ಭಾಗವಹಿಸುವರು. ಐದು ಪೌರಾಣಿಕ ಪ್ರಸಂಗಗಳ ಒಂದೊಂದು ಸನ್ನಿವೇಶವನ್ನು ನಿಗದಿತ ಸಮಯದಲ್ಲಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ನಂತರ ಆ ಕುರಿತು ಸಂಪನ್ಮೂಲ ವ್ಯಕ್ತಿಗಳು, ಕಲಾವಿದರು, ಕಲಾಸಕ್ತರು ಸಂವಾದ ನಡೆಸಲಿದ್ದಾರೆ. ವಿಶೇಷವಾಗಿ ಅರ್ಥಗಾರಿಕೆಯ ಕಲಿಕಾಸಕ್ತಿ ಇರುವವರಿಗೆ ತರಬೇತಿಯ ರೂಪವಾಗಿ ಈ ಕಮ್ಮಟ ಆಯೋಜನೆಗೊಂಡಿದೆ.

ಸಂಜೆ ರಾಧಾಕೃಷ್ಣ ಕಲ್ಚಾರ್, ಡಾ. ಮಹೇಶ ಭಟ್ಟ ಇಡಗುಂದಿ ಮುಂತಾದ ಕಲಾವಿದರನ್ನೊಳಗೊಂಡು ತಾಳಮದ್ದಲೆ ನಡೆಯಲಿದೆ.