- ಸೂರಗೊಂಡನಕೊಪ್ಪದಲ್ಲಿ 3 ದಿನಗಳ ಸಂತ ಸೇವಾಲಾಲ್‌ ಜಾತ್ರೆಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ ಸಂತ ಸೇವಾಲಾಲ್‌ ಪುಣ್ಯಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಂತ ಸೇವಾಲಾಲ್‌ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಕಾಟಿ ಆರೋಹಣ ಮಾಡುವ ಮೂಲಕ ಅದ್ಧೂರಿಯಾಗಿ ಚಾಲನೆಯಾಯಿತು.

ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ದೂದ್ಯಾ ತಳವ್‌ನಿಂದ ಮಹಿಳೆಯರು 101 ಕುಂಭಮೇಳದೊಂದಿಗೆ ಗಂಗೆಪೂಜೆ, ಶ್ರೀ ಸಂತ ಸೇವಾಲಾಲ್‌, ಮರಿಯಮ್ಮ ದೇವಿಯ ಶಿಲಾ ಮೂರ್ತಿಗಳಿಗೆ ಧಾರ್ಮಿಕ ವಿಧಿವಿಧಾನ ಪೂಜಾ ಕೈಂಕರ್ಯಗಳನ್ನು ನಡೆಸಿ ಭಜನೆಯೊಂದಿಗೆ ಸಾಧು ಸಂತರ ಮೆರವಣಿಗೆ ನಡೆಯಿತು. ದೇವಿಯ ಕಾಟಿ ಆರೋಹಣದ ಮೂಲಕ ಸಂತ ಸೇವಾಲಾಲ್‌ ಅವರ 287ನೇ ಜಯಂತಿ ಆರಂಭವಾಯಿತು.


15ರವರೆಗೆ ನಡೆಯಲಿರುವ ಜಾತ್ರೆ ಕಾರ್ಯಕ್ರಮದಲ್ಲಿ ಪವಿತ್ರ ದೂದಿಯ ತಳಾವ್‌ ಕಳಸದ ಆಗಮನ, ಸಮಾಜದ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಅಭಿಷೇಕ, ಮಾಲಾಧಾರಿಗಳಿಂದ ದರ್ಶನ ಮತ್ತು ಮಾಲಾ ವಿಸರ್ಜನೆ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ನಡೆಯುತ್ತದೆ. 15ರ ಮುಂಜಾನೆ 8-30ಕ್ಕೆ 287ನೇ ಜಯಂತಿಯ ಮಹಾಭೋಗ್‌ ಕಾರ್ಯಕ್ರಮ ಹಾಗೂ ಭೋಗ್‌ ಕುಂಡಕ್ಕೆ ಗೌರವ ಸಮರ್ಪಣೆ ಮಧ್ಯಾಹ್ನ ದೂದಿಯ ತಳಾವ್‌ನಲ್ಲಿ ತೀಜ್‌ ವಿಷರ್ಜನೆ ಕಾರ್ಯಕ್ರಮದೊಂದಿಗೆ ಉತ್ಸವ ತೆರೆ ಕಾಣಲಿದೆ.

ಶ್ರೀ ಸಂತ ಸೇವಾಲಾಲ್‌ ಮಹಾರಾಜರ, ಶ್ರೀ ಮಾತಾ ಮರಿಯಮ್ಮ ದೇವಿಯ ಕಾಟಿ ಆರೋಹಣ ಕಾರ್ಯಕ್ರಮದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್‌.ಜಯದೇವ ನಾಯ್ಕ, ಮಹಾಮಠದ ಧರ್ಮದರ್ಶಿ ಬಿ.ಹೀರಾನಾಯ್ಕ, ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಪ್ರಧಾನ ಕಾರ್ಯದರ್ಶಿ ಎನ್‌.ಅರುಣಕುಮಾರ್‌, ನಿಗಮ ಮಂಡಳಿ ವ್ಯವಸ್ಥಾಪಕ ಎನ್‌.ರಾಜು, ನರೇನಹಳ್ಳಿ ಅರುಣಕುಮಾರ್‌, ಕೆ.ಟಿ.ನಾಗರಾಜ್‌, ಜೆ.ಹರೀಶ್‌, ಸಂಸ್ಥಾಪಕ ಅಧ್ಯಕ್ಷ ಡಾ. ಎಲ್‌.ಈಶ್ವರ ನಾಯ್ಕ, ಆಡಳಿತಾಧಿಕಾರಿ ಸೇವ್ಯಾ ನಾಯ್ಕ, ಎಸ್‌.ಟಿ.ಎ. ವಾಗೀಶ್‌ ಲಮಾಣಿ, ಸಮುದಾಯದ ಮುಖಂಡರಾದ ಶಿವರಾಮ ನಾಯ್ಕ ಸೇರಿದಂತೆ ಮಾಲಾಧಾರಿಗಳು ಇದ್ದರು.

- - -

-ಚಿತ್ರ:

ಸೂರಗೊಂಡನಕೊಪ್ಪದ ಭಾಯಾಗಡ್‌ ಕ್ಷೇತ್ರದಲ್ಲಿ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮಗಳಿಗೆ ಕಾಟಿ ಆರೋಹಣ ಮೂಲಕ ಚಾಲನೆ ನೀಡಲಾಯಿತು.