ಬ್ಯಾಡಗಿ ಹಿಂಸಾಚಾರ, ಬೆಂಕಿ ಹಚ್ಚಿದ ಪ್ರಕರಣ, ₹ 5 ಕೋಟಿಗೂ ಅಧಿಕ ಹಾನಿ

| Published : Mar 13 2024, 02:05 AM IST

ಸಾರಾಂಶ

ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಹಿಂಸಾಚಾರ ಹಾಗೂ ವಾಹನ ಹಾಗೂ ಕಚೇರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರು. 5 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ಈ ಸಂಬಂಧ 4 ಪ್ರಕರಣ ದಾಖಲಾಗಿದ್ದು, ಪೊಲೀಸರು 80ಕ್ಕೂ ಹೆಚ್ಚಿ ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಬ್ಯಾಡಗಿ: ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಹಿಂಸಾಚಾರ ಹಾಗೂ ವಾಹನ ಹಾಗೂ ಕಚೇರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರು. 5 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ಈ ಸಂಬಂಧ 4 ಪ್ರಕರಣ ದಾಖಲಾಗಿದ್ದು, ಪೊಲೀಸರು 80ಕ್ಕೂ ಹೆಚ್ಚಿ ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಮೆಣಸಿನಕಾಯಿ ದರ ಕುಸಿತಗೊಂಡಿದೆ ಎಂದು ಆರೋಪಿಸಿ ಸೋಮವಾರ ಮೆಣಸಿನಕಾಯಿ ಬೆಳೆಗಾರರು ನಡೆಸಿದ ಹಿಂಸಾಕೃತ್ಯಗಳಲ್ಲಿ ಮಾರುಕಟ್ಟೆ ಕಚೇರಿ ಆವರಣ ಪೂರ್ತಿ ಬೆಂಕಿಯ ಕೆನ್ನಾಲಿಗೆಗೆ ನಾಶವಾಗಿದ್ದು, ಅತ್ಯುತ್ತಮ ವ್ಯಾಪಾರ ವಹಿವಾಟಿನಿಂದ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿದ್ದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಕಚೇರಿಯಲ್ಲಿ ಸುಟ್ಟು ಕರಕಲಾದ ವಸ್ತುಗಳನ್ನೇ ನೋಡಬೇಕಾಯಿತು.

5 ಕೋಟಿಗೂ ಅಧಿಕ ನಷ್ಟ: ಕೋಟ್ಯಂತರ ಮೌಲ್ಯದ ವಾಹನಗಳು ಸೇರಿದಂತೆ ಕಟ್ಟಡ ಪ್ರಾಂಗಣ ಬೆಂಕಿಗೆ ಆಹುತಿಯಾಗಿದ್ದು, ಕೆಲ ವರ್ಷದ ಹಿಂದೆಯಷ್ಟೇ ಕಟ್ಟಲಾಗಿದ್ದ ಭವ್ಯವಾದ ಎಪಿಎಂಸಿ ಕಟ್ಟಡ ಸುಟ್ಟು ಕರಕಲಾಗಿದ್ದು, ಕೋಟ್ಯಂತರ ಮೌಲ್ಯದ ತಾಂತ್ರಿಕ ಉಪಕರಣ ಸುಟ್ಟು ಅಂದಾಜು 5 ಕೋಟಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದ್ದಾಗಿ ತಿಳಿದು ಬಂದಿದೆ.

ಎಪಿಎಂಸಿ ಕಚೇರಿಯ ಎದುರು ನಿಲ್ಲಿಸಿದ್ದ 2 ಸ್ಕಾರ್ಪಿಯೊ, 2 ಬೋಲೆರೋ ಹಾಗೂ 1 ಸ್ವೀಪಿಂಗ್ ಮಿಷನ್, 1 ಅಗ್ನಿಶಾಮಕ ದಳದವಾಹನ, ಕಾರ್ಯದರ್ಶಿ ಹಾಗೂ ಸಿಬ್ಬಂದಿಯ ತಲಾ 1 ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೊರಗುತ್ತಿಗೆ ಸಿಬ್ಬಂದಿಯ ಮೂರು ಬೈಕ್‌, ಇನ್ನೋರ್ವನ ಬೈಕ್ ಕಳ್ಳತನವಾಗಿದೆ..

ಅಮೂಲ್ಯವಾದ ಕಡತಗಳು ನಾಶ:

ಕಚೇರಿಯೊಳಗೆ ರೈತರು ದಾಂಧಲೆ ನಡೆಸಿದ್ದಲ್ಲದೇ ಬೀರುಗಳಲ್ಲಿದ್ದ ಎಲ್ಲಾ ಕಡತಗಳನ್ನು ತೆಗೆದು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಇದರಿಂದ ಮಾರುಕಟ್ಟೆಯ ನಿವೇಶನಗಳ ಮಾಲೀಕರಿಗೆ ಸಂಬಂಧಿಸಿದ ಹಕ್ಕಪತ್ರಗಳು, ಕೋರ್ಟ್‌ ವ್ಯಾಜ್ಯಗಳ ಕಡತಗಳು ಸಂಪೂರ್ಣ ನಾಶವಾಗಿದ್ದು, ಮುಂದೇನು ಎಂಬ ಚಿಂತೆಯಲ್ಲಿ ಸಿಬ್ಬಂದಿಗಳಿದ್ದಾರೆ.

ದಾವಣಗೆರೆ ಐಜಿ ತ್ಯಾಗರಾಜ ಹಾಗೂ ಎಸ್ಪಿ ಅಂಶುಕುಮಾರ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳ ಹೆಡಮುರಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಮಾರುಕಟ್ಟೆ ಸೇರಿದಂತೆ ಪಟ್ಟಣದೆಲ್ಲೆಡೆ ಖಾಕಿಪಡೆಗಳು ಕಣ್ಗಾವಲು ಹಾಕಿದ್ದಾರೆ. 3 ಎಸ್ಪಿ, 4 ಹೆಚ್ಚುವರಿ ಎಸ್ಪಿ, 15 ಸಿಪಿಐ, 30 ಪಿಎಸ್‌ಐ, 762 ಪೊಲೀಸ್, 7 ಕೆಎಸ್‌ಆರ್‌ಪಿ, 8 ಜಿಲ್ಲಾ ಸಶಸ್ತ್ರ ಮೀಸಲು, 1 ಸಿ.ಆಯ್.ಎಸ್.ಎಫ್. ತುಕಡಿಗಳನ್ನು ನಿಯೋಜನೆ ಮಾಡಿದ್ದು, ಮಂಗಳವಾರ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.80 ಜನ ಕಿಡಿಗೇಡಿಗಳ ವಶಕ್ಕೆ: ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ 4 ಎಫ್.ಐ.ಆರ್. ದಾಖಲಾಗಿವೆ, ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಪ್ರದೇಶದಿಂದ ಆಗಮಿಸಿದ್ದ ಒಟ್ಟು 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.

ಮಂಗಳವಾರ ಎಂದಿನಂತೆ ಟೆಂಡರ್‌: ಬ್ಯಾಡಗಿ ಮಾರುಕಟ್ಟೆ ಸಹಜ ಸ್ಥಿತಿಯತ್ತ ಮರಳಿದ್ದು, ಮಂಗಳವಾರ ಎಂದಿನಂತೆ ಮಾರುಕಟ್ಟೆಯಲ್ಲಿ ಟೆಂಡರ್ ಕಾರ‍್ಯ ನಡೆದು ಒಟ್ಟು 46 ಸಾವಿರ ಚೀಲ ಮೆಣಸಿನಕಾಯಿ ವ್ಯಾಪಾರಸ್ಥರು ಖರೀದಿಸಿದ್ದಾರೆ, ದರದಲ್ಲಿ ಮಾತ್ರ ಸ್ಥಿರತೆ ಮುಂದುವರೆದಿದ್ದು ಯಾವುದೇ ತಕರಾರಿಲ್ಲದೇ ಮಾರಾಟ ಮಾಡಿ ಹಣ ಪಡೆದು ರೈತರು ತಮ್ಮ ಊರುಗಳಿಗೆ ತೆರಳಿದರು.