ಸರ್ಕ್ಯೂಟ್ ಹೌಸ್‌- ಬಿಜೈ ಚರ್ಚ್‌ ಜಂಕ್ಷನ್‌ ರಸ್ತೆಗೆ ಜಾರ್ಜ್‌ ಫರ್ನಾಂಡಿಸ್‌ ನಾಮಕರಣ

| Published : Mar 13 2024, 02:05 AM IST

ಸರ್ಕ್ಯೂಟ್ ಹೌಸ್‌- ಬಿಜೈ ಚರ್ಚ್‌ ಜಂಕ್ಷನ್‌ ರಸ್ತೆಗೆ ಜಾರ್ಜ್‌ ಫರ್ನಾಂಡಿಸ್‌ ನಾಮಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಈ ರಸ್ತೆಗೆ ಜಾರ್ಜ್‌ ಫರ್ನಾಂಡಿಸ್ ಹೆಸರಿಡಲು ಕೊಂಕಣಿ ಲೇಖಕರ ಸಂಘದ ರಿಚರ್ಡ್‌ ಮೊರಾಸ್‌ ಸೇರಿದಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಜಯಾನಂದ ಅಂಚನ್‌ ಮೇಯರ್‌ ಆಗಿದ್ದಾಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಜೆಂಡಾ ಇರಿಸಿ, ನಿರ್ಣಯ ಮಾಡಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಪತ್ರ ಸಲ್ಲಿಕೆಯಾಗಿತ್ತು. ಇದೀಗ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಮೇಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಸರ್ಕ್ಯೂಟ್‌ ಹೌಸ್‌ ವೃತ್ತದಿಂದ ಬಿಜೈ ಚರ್ಚ್‌ ಬಳಿಯ ವೃತ್ತದವರೆಗಿನ ಸುಮಾರು ಒಂದು ಕಿ.ಮೀ. ರಸ್ತೆಗೆ ಮಾಜಿ ಕೇಂದ್ರ ಸಚಿವ, ಪದ್ಮವಿಭೂಷಣ ಜಾರ್ಜ್‌ ಫರ್ನಾಂಡಿಸ್‌ ಹೆಸರಿಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿರುವುದರಿಂದ ನಾಮಕರಣ ಕಾರ್ಯಕ್ರಮವನ್ನು ಚುನಾವಣೆ ನಂತರ ಪಕ್ಷಭೇದವಿಲ್ಲದೆ ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದರು.ಈ ರಸ್ತೆಗೆ ಜಾರ್ಜ್‌ ಫರ್ನಾಂಡಿಸ್ ಹೆಸರಿಡಲು ಕೊಂಕಣಿ ಲೇಖಕರ ಸಂಘದ ರಿಚರ್ಡ್‌ ಮೊರಾಸ್‌ ಸೇರಿದಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಜಯಾನಂದ ಅಂಚನ್‌ ಮೇಯರ್‌ ಆಗಿದ್ದಾಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಜೆಂಡಾ ಇರಿಸಿ, ನಿರ್ಣಯ ಮಾಡಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಪತ್ರ ಸಲ್ಲಿಕೆಯಾಗಿತ್ತು. ಇದೀಗ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಮೇಯರ್‌ ಹೇಳಿದರು.ಜಾರ್ಜ್‌ ಫರ್ನಾಂಡಿಸ್‌ ಅವರು ಬಡವರು, ಕಾರ್ಮಿಕರ ಹೀರೋ ಆಗಿದ್ದರು. ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಅವರು ಮುಂಬೈನಲ್ಲಿ ಟ್ರೇಡ್‌ ಯೂನಿಯನ್‌ ನಾಯಕರಾಗಿ ಹೋರಾಟ ಸಂಘಟಿಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿದ ಮಹಾನಾಯಕ. ಕೇಂದ್ರ ರೈಲ್ವೆ ಸಚಿವರಾಗಿ ಮಂಗಳೂರಿನಿಂದ ಮುಂಬೈಗೆ ಕೊಂಕಣ ರೈಲ್ವೆ ಕೊಡುಗೆ ನೀಡಿದ್ದಾರೆ. ರಕ್ಷಣಾ ಸಚಿವರಾಗಿ ಕಾರ್ಗಿಲ್‌ ಯುದ್ಧದಲ್ಲಿ ಅಪಾರ ಶ್ರಮ ವಹಿಸಿ ಗೆಲುವಿನ ಪತಾಕೆ ಹಾರಿಸಿದ್ದರು. ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಅವರ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ನಗರದ ಮುಖ್ಯರಸ್ತೆಗೆ ನಾಮಕರಣ ಅತಿ ಅಗತ್ಯದ ಕಾರ್ಯ ಎಂದು ಹೇಳಿದರು.ಇನ್ನೆರಡು ರಸ್ತೆಗೆ ನಾಮಕರಣ: ಮುಂದಿನ ದಿನಗಳಲ್ಲಿ ಸುರತ್ಕಲ್‌- ಚೊಕ್ಕಬೆಟ್ಟು ರಸ್ತೆಗೆ ಕ್ಯಾ.ಎಂ.ವಿ. ಪ್ರಾಂಜಲ್‌ ನಾಮಕರಣ ಹಾಗೂ ರೊನಾಲ್ಡ್‌ ಕೇವಿನ್ಸ್‌ ಸೆರಾವೊ ಅವರ ಹೆಸರಿನಲ್ಲಿ ಪದವು ರಸ್ತೆಗೆ ನಾಮಕರಣ ಹಾಗೂ ಅಭಿವೃದ್ಧಿ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ಮೇಯರ್‌ ತಿಳಿಸಿದರು.ನಾರಾಯಣ ಗುರು ವೃತ್ತ ಸದ್ಯ ಮೂಡದಿಂದ ನಿರ್ವಹಣೆಯಾಗುತ್ತಿದೆ. ಅದನ್ನು ಪಾಲಿಕೆ ವತಿಯಿಂದ ನಿರ್ವಹಣೆ ಮಾಡುವ ಬಗ್ಗೆ ಮೂಡ ಜತೆ ಪತ್ರ ವ್ಯವಹಾರ ನಡೆಸಲಾಗಿದೆ, ಎನ್‌ಒಸಿ ನಿರೀಕ್ಷೆಯಲ್ಲಿದ್ದೇವೆ ಎಂದರು.ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಣೇಶ್‌, ಲೋಹಿತ್‌ ಅಮೀನ್‌ ಇದ್ದರು.