ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಬಾಗಲಕೋಟ ವಿಶ್ವವಿದ್ಯಾಲಯದ ಪ್ರಥಮ ಕಘಟಿಕೋತ್ಸವವು ಶುಕ್ರವಾರ ಏ.24 ರಂದು ಬೆಳಗ್ಗೆ 11.30ಕ್ಕೆ ಬಿಎಲ್‌ಡಿಇ ಆವರಣದ ದರ್ಬಾರ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಡಾ.ಆನಂದ ದೇಶಪಾಂಡೆ ಹೇಳಿದರು.ವಿವಿಯ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದಾರೆ. ಸಹಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ನಾಗಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ನಿರ್ದೇಶಕ ಭೀಮರಾಯ ಎ.ಮೇತ್ರಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್‌ನ ಸದಸ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.ವಿಶ್ವವಿದ್ಯಾಲಯವು 2023ರಲ್ಲಿ ಪ್ರಾರಂಭವಾಗಿದೆ, 72 ಕಾಲೇಜುಗಳು ವಿವಿಯ ವ್ಯಾಪ್ತಿಗೆ ಒಳಪಡುತ್ತದೆ. 2023-24ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ತಂಡ ತೇರ್ಗಡೆಯಾಗಿದೆ. ಒಟ್ಟು 16 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ 6, ಕಾಮರ್ಸ್‌ನಲ್ಲಿ ಇಬ್ಬರು, ಎಜುಕೇಷನ್‌ನಲ್ಲಿ ನಾಲ್ವರು ಹಾಗೂ ವಿಜ್ಞಾನ ವಿಭಾಗದಲ್ಲಿ ನಾಲ್ಕು ಜನ ವಿದ್ಯಾರ್ಥಿಗಳಿದ್ದಾರೆ ಎಂದರು.
ಮೂವರು ಸಾಧಕರಿಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ. ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್‌ನ ಗುರುಮಹಾಂತ ಸ್ವಾಮಿಗಳು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು, ಬಾಹ್ಯಾಕಾಶ ವಿಜ್ಞಾನಿ ಎಸ್.ನಂಬಿ ನಾರಾಯಣನ್, ಟೆಕ್ ಉದ್ಯಮಿ ಮಹೇಶ್ ಬೆಲ್ಲದ ಅವರಿಗೆ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಕುಲಸಚಿವ ಸೋಮಲಿಂಗ ಗೆಣ್ಣೂರ, ಕುಲಸಚಿವೆ (ಮೌಲ್ಯಮಾಪನ) ಪ್ರೋ.ಲತಾ.ಕೆ.ಪಿ., ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ, ಪ್ರೊ.ದಯಾನಂದ .ಜಿ. ಸಹುಕಾರ, ಡಾ.ಮಲ್ಲಿಕಾರ್ಜುನ ಮರಡಿ , ಪ್ರೋ.ರಾಜೇಶ್ವರಿ ಮಠದ ಇದ್ದರು. ಎಂಡಿಎ ವಿಭಾಗದ ಪೂಜಾ ಅಸೊಡಿ ನಿರೂಪಿಸಿದರು.